ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದ ಶಾಸಕ ಸಿಂಧನೂರು ಹಂಪನಗೌಡ ಬಾದರ್ಲಿ ಸೋದರಳಿಯ ಬಸನಗೌಡ ಬಾದರ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೆ.ಕೆಂಪರಾಜು, ಕೆ.ಶಿವಕುಮಾರ್, ಆರ್. ರಾಜೇಂದ್ರ ಹಾಗೂ ಸುಮಯ್ಯಾ ತಬ್ರೇಝ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದಲ್ಲದೆ, ಪ್ರಧಾನ ಕಾರ್ಯದರ್ಶಿಗಳಾಗಿ 11 ಮಂದಿ ಹಾಗೂ ಕಾರ್ಯದರ್ಶಿಗಳಾಗಿ 35 ಮಂದಿ ಆಯ್ಕೆಯಾಗಿದ್ದಾರೆ.
ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳು ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಂದ ಸೋಮವಾರ ಅಥವಾ ಮಂಗಳವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಂಬಂಧಿ ಕೆ. ಕೆಂಪರಾಜು, ಶಾಸಕ ಹಂಪನಗೌಡ ಬಾದರ್ಲಿ ಸಂಬಂಧಿ ಬಸನಗೌಡ ಬಾದರ್ಲಿ, ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಪುತ್ರ ಆರ್. ರಾಜೇಂದ್ರ ಮಧ್ಯೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.