ಬೆಂಗಳೂರು: ಸರಿಯಾಗಿ ಶಾಸಕಾಂಗ ಸಭೆಗೆ ಬರುತ್ತಿಲ್ಲ ಎಂದು ಮಾಜಿ ವಸತಿ ಸಚಿವ ಅಂಬರೀಶ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವರ್ಷ ಸಂಪುಟದಿಂದ ಕೈಬಿಟ್ಟಿದ್ದರು. ಅಂಬರೀಶ್ ಅವರು ಶಾಸಕಾಂಗ ಸಭೆಗಳಿಗೆ ಗೈರಾಗಲು ಹವಾ ನಿಯಂತ್ರಣ ವ್ಯವಸ್ಥೆ ಕಾರಣ ಎಂದು ಹೇಳಿದ್ದಾರೆ.
ಶಾಸಕಾಂಗ ಸಭೆಗಳಿಗೆ ಗೈರಾಗುತ್ತಿರುವುದಕ್ಕೆ ಕಾರಣ ತಿಳಿಸುವಂತೆ ವಿಧಾನಸಭೆ ಸ್ಪೀಕರ್ ಕೆಬಿ ಕೋಳಿವಾಡ ಅವರು ಅಂಬರೀಶ್ ಅವರಿಗೆ ಕಳೆದ ವಾರ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಂಬರೀಶ್ ಅವರು ವಿಧಾನಸಭೆ ಮತ್ತು ಕೌನ್ಸಿಲ್ ಹಾಲ್ ನಲ್ಲಿ ಎಸಿಯನ್ನು ಅಳವಡಿಸಲಾಗಿದ್ದು ನನಗೆ ಎಸಿ ಆಗೋಲ್ಲ ಹೀಗಾಗಿ ನಾನು ಯಾವುದೇ ಸಭೆಗಳಿಗೆ ಹಾಜರಾಗುತ್ತಿಲ್ಲ ಎಂದು ಹೇಳಿದ್ದಾರೆ.
ಹವಾ ನಿಯಂತ್ರಣ ಕೊಠಡಿಯಲ್ಲಿ ಸುದೀರ್ಘವಾಗಿ ಕುಳಿತುಕೊಳ್ಳಲು ನನ್ನ ಆರೋಗ್ಯ ಸಹಕರಿಸುತ್ತಿಲ್ಲ. ಹೀಗಾಗಿ ನಾನು ಕಳೆದ ಒಂದು ವರ್ಷದಿಂದ ಯಾವುದೇ ಶಾಸಕಾಂಗ ಸಭೆಗಳಿಗೆ ಹಾಜರಾಗುತ್ತಿಲ್ಲ ಎಂದು ಅಂಬರೀಶ್ ಪ್ರತ್ಯುತ್ತರ ನೀಡಿದ್ದಾರೆ.
ಶಾಸಕಾಂಗ ಸಭೆಗಳಿಗೆ ಅಂಬರೀಶ್ ಗೈರಾಗುತ್ತಿರುವ ಹಿನ್ನಲೆಯಲ್ಲಿ ಅವರ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳುತ್ತೀರ ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಕೋಳಿವಾಡ ಅವರು ಸಭೆಗಳಿಗೆ ಹಾಜರಾಗದ ಶಾಸಕಾಂಗ ಸದಸ್ಯರ ಸದಸ್ಯತ್ವವನ್ನು ಅಸಿಂಧುಗೊಳಿಸುವ ಯಾವುದೇ ಕಾನೂನು ಇಲ್ಲ ಎಂದು ಹೇಳಿದ್ದಾರೆ.