ಬೆಂಗಳೂರು: ಸರ್ಕಾರದ ಸ್ವಪ್ರತಿಷ್ಠೆಗೆ ಸಾರ್ವಜನಿಕರು ಬಲಿಯಾಗುತ್ತಿದ್ದು, ಖಾಸಗಿ ವೈದ್ಯರ ಮುಷ್ಕರದ ಹಿಂದೆ ಪ್ರತಿಪಕ್ಷಗಳ ಕೈವಾಡವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಇಂದು ಮುಷ್ಕರ ನಿರತ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಕೆಪಿಎಂಇ ಕಾಯ್ಗೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ಜನತೆಯಲ್ಲಿ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ. ಪ್ರತಿಪಕ್ಷಗಳ ಕುರಿತು ಸಾರ್ವಜನಿಕರಲ್ಲಿ ಕಾಂಗ್ರೆಸ್ ಸರ್ಕಾರ ಸುಳ್ಳು ಮಾಹಿತಿಯನ್ನು ಸೋರಿಕೆ ಮಾಡುತ್ತಿದೆ. ಕೆಪಿಎಂಇ ಕಾಯ್ದೆಯನ್ನು ಮೈತ್ರಿ ಸರ್ಕಾರ ಮಂಡಿಸಿ 10 ವರ್ಷಗಳು ಕಳೆದಿವೆ. ಆಗ ಇಲ್ಲದ ವೈದ್ಯರ ಪ್ರತಿಭಟನೆ ಈಗೇಕೆ ಭುಗಿಲೆದ್ದಿದೆ ಎಂದು ಪ್ರಶ್ನಿಸಿದರು.
ನಾವು ಮಂಡಿಸಿದ್ದ ವಿಧೇಯಕದಲ್ಲಿ ಈ ವರೆಗೂ ವೈದ್ಯರಿಗೆ ತೊಂದರೆಯಾಗುವ ಅಂಶಗಳಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ಕಚೇರಿ ಸುಳ್ಳು ಮಾಹಿತಿಗಳನ್ನು ಪಸರಿಸುತ್ತಿದೆ. ಆ ಮೂಲಕ ಸರ್ಕಾರ ತನ್ನ ಸಣ್ಣತನವನ್ನು ಪ್ರದರ್ಶನ ಮಾಡಿದೆ. ನಿನ್ನೆ ಕೂಡ ನಾನು ಪ್ರತಿಭಟನಾ ನಿರತ ವೈದ್ಯರನ್ನು ಭೇಟಿ ಮಾಡಿ, ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಮುಷ್ಕರ ನಿಲ್ಲಿಸುವಂತೆ ಮನವಿ ಮಾಡಿದ್ದೆ.
ಇಂದು ಕೂಡ ಅವರ ಮನವೊಲಿಸಲು ಬಂದಿದ್ದೇನೆ. ಆದರೆ ಸರ್ಕಾರ ವೈದ್ಯರ ಮುಷ್ಕರದ ಹಿಂದೆ ಪ್ರತಿಪಕ್ಷಗಳ ಕೈವಾಡವಿದೆ ಎಂದು ವರದಿ ಹಬ್ಬಿಸುತ್ತಿದೆ. ವೈದ್ಯರ ಮುಷ್ಕರದಲ್ಲಿ ಪ್ರತಿಪಕ್ಷಗಳ ಚಿತಾವಣೆ ಇಲ್ಲ. ನಾವು ಬಡವರ ವಿರೋಧಿಗಳಲ್ಲ.. ನಾವೂ ಕೂಡ ಬಡಕುಟುಂಬದಿಂದ ಬಂದಿದ್ದೇವೆ. ಸಾರ್ವಜನಿಕರ ಇಂದಿನ ಸ್ಥಿತಿಗೆ ಮತ್ತು ಸರಣಿ ಸಾವಿಗೆ ಸರ್ಕಾರವೇ ಕಾರಣ. ಸರ್ಕಾರದ ಸ್ವಪ್ರತಿಷ್ಠೆಗೆ ಈಗ ಜನ ಬಲಿಯಾಗುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.