ಮುಖ್ಯಮಂತ್ರಿ ಸಿದ್ದರಾಮಯ್ಯ(ಸಂಗ್ರಹ ಚಿತ್ರ)
ಬೆಂಗಳೂರು: ಈ ವರ್ಷ ರಾಜ್ಯದ ರೈತರ ಸಹಕಾರಿ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಲು ಅಪೆಕ್ಸ್ ಬ್ಯಾಂಕಿನಲ್ಲಿ 1,400 ಕೋಟಿ ರೂಪಾಯಿ ಹೂಡಿಕೆ ಮಾಡಲು ಮೈಸೂರು ಮಿನರಲ್ಸ್ ಲಿಮಿಟೆಡ್ ಗೆ ಒತ್ತಡ ಹೇರಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಾಡಿರುವ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ನಿರಾಕರಿಸಿದೆ.
ನಿನ್ನೆ ಹೊರಡಿಸಲಾಗಿದ್ದ ಅಧಿಕೃತ ಹೇಳಿಕೆಯಲ್ಲಿ ಮುಖ್ಯಮಂತ್ರಿಗಳ ಕಚೇರಿ, ಸಹಕಾರಿ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ನಿರ್ಧಾರದಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದೆ.
ಸಹಕಾರಿ ಬ್ಯಾಂಕುಗಳು ಮತ್ತು ಸೊಸೈಟಿಗಳಿಗೆ ಅಗತ್ಯ ಹಣವನ್ನು ತ್ವರಿತವಾಗಿ ಒದಗಿಸಲು ರಾಜ್ಯ ಸರ್ಕಾರ ನಿಗದಿತ ಠೇವಣಿ ಮೊತ್ತವನ್ನು ಸಾರ್ವಜನಿಕ ವಲಯ ಸಂಸ್ಥೆಗಳಿಂದ ತೆಗೆದುಕೊಳ್ಳಲು ನಿರ್ಧರಿಸಿದೆ ಮತ್ತು ಉಳಿದ ಹಣವನ್ನು ಸೂಕ್ತ ಮರು ವಿನಿಯೋಗಗಳ ಮೂಲಕ ಭರಿಸಲು ನಿರ್ಧರಿಸಿದೆ. 2017-18ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಬಗ್ಗೆ ಪ್ರಸ್ತಾಪಿಸಿರದಿದ್ದ ಕಾರಣ ಈ ಕ್ರಮ ಕೈಗೊಳ್ಳಲಾಯಿತು. ಅದರ ಪ್ರಕಾರ ಕಳೆದ ತಿಂಗಳು 28ರಂದು ಮೈಸೂರು ಮಿನರಲ್ಸ್ ಲಿಮಿಟೆಡ್ ನಿಂದ 1,400 ಕೋಟಿ ರೂಪಾಯಿಗಳನ್ನು ಅಪೆಕ್ಸ್ ಬ್ಯಾಂಕಿನಲ್ಲಿ ಠೇವಣಿಯಿಡುವ ನಿರ್ಧಾರ ಕೈಗೊಳ್ಳಲಾಗಿದ್ದು ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಾಣಿಜ್ಯ ಬ್ಯಾಂಕುಗಳ ಮೂಲಕ ಮೈಸೂರು ಮಿನರಲ್ಸ್ ಲಿಮಿಟೆಡ್ ಪಡೆಯುವ ಬಡ್ಡಿ ಮೊತ್ತದಷ್ಟೇ ಬಡ್ಡಿದರವನ್ನು ಅಪೆಕ್ಸ್ ಬ್ಯಾಂಕು ಕೂಡ ನೀಡುವುದರಿಂದ ರಾಜ್ಯ ಸರ್ಕಾರದ ಈ ನಿರ್ಧಾರ ಮೈಸೂರು ಮಿನರಲ್ಸ್ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಮುಂದಿನ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರ ಅಗತ್ಯ ಹಣ ನೀಡುವುದರಿಂದ, ಅಪೆಕ್ಸ್ ಬ್ಯಾಂಕ್ ಠೇವಣಿ ಮೊತ್ತವನ್ನು ಮೈಸೂರು ಮಿನರಲ್ಸ್ ಲಿಮಿಟೆಡ್ ಗೆ ಹಿಂತಿರುಗಿಸಲು ಸಾಧ್ಯವಿರುವುದರಿಂದ ಅಲ್ಲಿನ ನೌಕರರು ಗಾಬರಿಪಡಬೇಕಾಗಿಲ್ಲ ಎಂದು ಹೇಳಿಕೆಯಲ್ಲಿ ಮುಖ್ಯಮಂತ್ರಿಗಳ ಕಚೇರಿ ಭರವಸೆ ನೀಡಿದೆ.
1,400 ಕೋಟಿ ರೂಪಾಯಿ ಹಣವನ್ನು ಅಪೆಕ್ಸ್ ಬ್ಯಾಂಕಿನಲ್ಲಿ ಹೂಡಿಕೆ ಮಾಡುವಂತೆ ಮೈಸೂರು ಮಿನರಲ್ಸ್ ಲಿಮಿಟೆಡ್ ಗೆ ರಾಜ್ಯ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿನ್ನೆ ಆರೋಪಿಸಿದ್ದರು.