ಬೆಂಗಳೂರು: ಕೇರಳ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಅನುಸರಿಸಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ದೇವಸ್ಥಾನಗಳಲ್ಲಿ ದಲಿತ ಅರ್ಚಕರನ್ನು ನೇಮಿಸುವ ಕುರಿತು ಒಲವು ವ್ಯಕ್ತಪಡಿಸಿದ್ದಾರೆ.
ಕೇರಳದಲ್ಲಿ ಮಾಡಿರುವಂತೆ ಕರ್ನಾಟಕದಲ್ಲಿ ಕೂಡ ಮುಜರಾಯಿ ದೇವಸ್ಥಾನಗಳಲ್ಲಿ ದಲಿತ ಅರ್ಚಕರನ್ನು ನೇಮಿಸುವುದರಲ್ಲಿ ಯಾವುದೇ ವಿರೋಧವಿಲ್ಲ. ನಾವದನ್ನು ಮಾಡುತ್ತೇವೆ ಎಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಕರ್ನಾಟಕದಲ್ಲಿ ಮುಜರಾಯಿ ಇಲಾಖೆಯಡಿ ಸುಮಾರು 35,000 ದೇವಸ್ಥಾನಗಳಿವೆ ಎಂದು ಮುಖ್ಯಮಂತ್ರಿಗಳ ಕಚೇರಿ ಹೇಳಿಕೆ ತಿಳಿಸಿದೆ.
ಮಹತ್ವಪೂರ್ಣ ಆದೇಶವೊಂದರಲ್ಲಿ ಕೇರಳದ ಟ್ರಾವಂಕೂರು ದೇವಸ್ಥಾನ ಮಂಡಳಿಯಡಿ ಬರುವ ವಿವಿಧ ದೇವಸ್ಥಾನಗಳಲ್ಲಿ 6 ಮಂದಿ ದಲಿತರು ಸೇರಿದಂತೆ 36 ಮಂದಿ ಬ್ರಾಹ್ಮಣೇತರ ಅರ್ಚಕರನ್ನು ನೇಮಿಸಲು ಕೇರಳ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು.
ಶಬರಿಮಲೆಯ ಅಯ್ಯಪ್ಪ ದೇವಸ್ಥಾನ ಸೇರಿದಂತೆ ಟ್ರಾವಂಕೂರು ದೇವಸ್ಥಾನ ಮಂಡಳಿಯಡಿ 1.248 ದೇವಸ್ಥಾನಗಳಿವೆ.
ಕೇರಳದ ಸಿಪಿಎಂ ನೇತೃತ್ವದ ಎಲ್ ಡಿಎಫ್ ಸರ್ಕಾರ ದಲಿತರು ಮತ್ತು ಬ್ರಾಹ್ಮಣೇತರ ಅರ್ಚಕರನ್ನು ದೇವಸ್ಥಾನದ ಪೂಜೆಗಳಿಗೆ ನೇಮಿಸಿರುವ ಕ್ರಮವನ್ನು ಮೌನ ಕ್ರಾಂತಿ ಎಂದು ವ್ಯಾಖ್ಯಾನಿಸಿದೆ.