ಬೆಂಗಳೂರು: ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಆಡಳಿತರೂಢ ಕಾಂಗ್ರೆಸ್ ಈಗೀನಿಂದಲೇ ಭರ್ಜರಿ ಸಿದ್ಧತೆ ನಡೆಸಿದ್ದು, ಈಗಾಗಲೇ ಚುನಾವಣಾ ಪ್ರಣಾಳಿಕೆಯ ಸಿದ್ಧತೆಯಲ್ಲಿ ತೊಡಗಿದೆ.
ಹೌದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಪತ್ಯ ಸ್ಥಾಪಿಸಲು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ನೊಂದಿಗೆ ತೀವ್ರ ಪೈಪೋಟಿ ನಡೆಸಿರುವ ಕಾಂಗ್ರೆಸ್, ಹೊಸದಾಗಿ ರಚನೆಯಾದ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿಯ ಮೊದಲ ಸಭೆಯನ್ನು ಅಕ್ಟೋಬರ್ 29ರಂದು ನಿಗದಿ ಮಾಡಿದೆ.
'ಈ ಬಾರಿ ನಾವು ಪಕ್ಷ ಪ್ರಣಾಳಿಯಕನ್ನು ವಿಭಿನ್ನ ರೀತಿಯಲ್ಲಿ ಸಿದ್ಧಪಡಿಸುತ್ತಿದ್ದು, ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ತಯಾರಿಸುವ ಮೊದಲು ನಾವು ಸಂಬಂಧಪಟ್ಟ ಎಲ್ಲರೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸುತ್ತೇವೆ' ಎಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ಹೇಳಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಬಿಎಲ್ ಶಂಕರ್ ಅವರು ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ.
ಅಕ್ಟೋಬರ್ 29ರಂದು ನಡೆಯುವ ಮೊದಲ ಸಭೆಯ ನಂತರ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಉಪ ಸಮಿತಿಗಳನ್ನು ರಚನೆ ಮಾಡಲಾಗುವುದು. ಸಮಿತಿಯ ಸದಸ್ಯರು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ, ಚುನಾವಣಾ ಕ್ಷೇತ್ರಗಳನ್ನು ಗುರುತಿಸಿ, ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಅನುಷ್ಠಾನಗೊಳಿಸಲಾಗಿದೆಯೇ ಎಂಬುದರ ಕುರಿತು ಆಯಾ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಮೊಯ್ಲಿ ತಿಳಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ನೀಡಿದ್ದ ಬಹುತೇಕ ಎಲ್ಲಾ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಉಳಿದ ಕೆಲವು ಭರವಸೆಗಳನ್ನು ಶೀಘ್ರದಲ್ಲೇ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಬಾರಿ ಹೇಳಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.