ಬೆಂಗಳೂರು: ಸಚಿವ ಕೆ.ಜೆ. ಜಾರ್ಜ್'ಯೇನು ನನ್ನ ಶಿಷ್ಯ ಅಲ್ಲ, ನಾನು ಅವರನ್ನು ರಕ್ಷಣೆ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಜ್ ಅವರು ರಾಜೀನಾಮೆಗೆ ಬಿಜೆಪಿ ಆಗ್ರಹಿಸುತ್ತಿರುವ ಹಿನ್ನಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಾರ್ಜ್ ಅವರು ನನ್ನ ಶಿಷ್ಯ ಅಲ್ಲ. ನಾನು ಅವರನ್ನು ರಕ್ಷಣೆ ಮಾಡುತ್ತಿಲ್ಲ. ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ಅವರು ಮೊದಲು ರಾಜೀನಾಮೆ ನೀಡಬೇಕು. ವಂಚನೆ, ಡಿನೋಟಿಫಿಕೇಶನ್ ಅವ್ಯವಹಾರ ಸೇರಿದಂತೆ ಯಡಿಯೂರಪ್ಪ ಅವರ ಮೇಲೆ ಹಲವಾರು ಪ್ರಕರಣಗಳಿವೆ. ಚುನಾವಣಾ ಸಂದರ್ಭದಲ್ಲಿ ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸ್ವತಃ ಯಡಿಯೂರಪ್ಪ ಅವರೇ ತಮ್ಮ ಮೇಲೆ ಪ್ರಕರಣಗಳಿರುವ ಬಗ್ಗೆ ಮಾಹಿತಿ ನೀಡಿದ್ದಾರೆಂದು ಹೇಳಿದ್ದಾರೆ.
ಜಾರ್ಜ್ ಪ್ರಕರಣವನ್ನು ಬಿಜೆಪಿಯವರು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ತಟ್ಟೆಯಲ್ಲಿಯೇ ಹೆಗ್ಗಣ ಬಿದ್ದಿರುವಾಗ ಬಿಜೆಪಿಯವರು ಮತ್ತೊಬ್ಬರ ತಟ್ಟೆಯಲ್ಲಿ ನೊಣ ಹುಡುಕಲು ಹೊರಟಿದ್ದಾರೆ. ಇಷ್ಟೊಂದು ಪ್ರಕರಣಗಳಿರುವ ಯಡಿಯೂರಪ್ಪ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಅರ್ಹರೇ?...ಅಲ್ಲದೆ, ಅವರು ಮುಖ್ಯಮಂತ್ರಿ ಅಭ್ಯರ್ಥಿ.
ಎಫ್ಐಆರ್ ದಾಖಲಾಗಿದೆ ಎಂದರೆ ಆರೋಪ ಸಾಬೀತಾಗಿದೆ ಎಂದು ಅರ್ಥವಲ್ಲ. ಯಾರೇ ದೂರು ನೀಡಿದರೂ ಮೊದಲು ಎಫ್ಐಆರ್ ದಾಖಲಿಸುವುದು ಸಹಜ. ಅಷ್ಟಕ್ಕೇ ಜಾರ್ಜ್ ಅವರ ರಾಜೀನಾಮೆಗೆ ಒತ್ತಾಯ ಮಾಡುವುದು ಸರಿಯಲ್ಲ. ನಾನು ಕಾನೂನು ಪರವಾಗಿದ್ದೇನೆಯೇ ಹೊರತು, ಜಾರ್ಜ್ ಪರವಲ್ಲ. ಈ ಹಿಂದೆ ಜಾರ್ಜ್ ಅವರು ನಾನು ಬೇಡವೆಂದರೂ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದರು. ಅವರು ಮತ್ತೆ ಏಕೆ ರಾಜೀನಾಮೆ ಕೊಡಬೇಕು?...ಎಂದಿದ್ದಾರೆ.
ಇದೇ ವೇಳೆ ಜಾರ್ಜ್ ಅವರಿಗೆ ಹೆಚ್.ಡಿ.ಕುಮಾರಸ್ವಾಮಿಯವರು ಬೆಂಬಲ ವ್ಯಕ್ತಪಡಿಸಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕುಮಾರಸ್ವಾಮಿಯವರ ಹೇಳಿಕೆ ಸಚಿವರ ಪರವಾಗಿದ್ದಾರೆಂದು ಅರ್ಥವಲ್ಲ ಎಂದು ತಿಳಿಸಿದ್ದಾರೆ.
ಬಳಿಕ ಹೆಚ್'ಡಿಕೆ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಭೇಟಿ ಕುರಿತಂತೆ ಮಾತನಾಡಿದ ಅವರು, ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ಭೇಟಿ ಬಗ್ಗೆ ನನಗೆ ಮಾಹಿತಿಯಿಲ್ಲ. ವಿದ್ಯುತ್ ಖರೀದಿ ಸಂಬಂಧ ಇಂಧನ ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ತನಿಖೆಗೆ ರಚನೆಯಾಗಿರುವ ಸದನ ಸಮಿತಿಯಲ್ಲಿ ಹೆಚ್'ಡಿಕೆ ಅವರು ಸದಸ್ಯರಾಗಿದ್ದಾರೆ. ಈ ಹಿನ್ನಲೆಯಲ್ಲಿ ಇಬ್ಬರು ಭೇಟಿ ಮಾಡಿ ಚರ್ಚೆ ನಡೆಸಿರಬಹುದು ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos