ರಾಜಕೀಯ

ಶಿವಮೊಗ್ಗದ ಘನತೆಗೆ ಯಡಿಯೂರಪ್ಪ ದೊಡ್ಡ ಕಳಂಕ: ಸಿಎಂ ಸಿದ್ದರಾಮಯ್ಯ

Shilpa D
ಶಿವಮೊಗ್ಗ: ಕರ್ನಾಟಕ ಇತಿಹಾಸದಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರಮುಖ ಸ್ಥಾನವಿದೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಜಿಲ್ಲೆಯಲ್ಲಿ ನಡೆದ ಹಲವು ಸ್ವಾತಂತ್ರ್ಯ ಹೋರಾಟ ಹಾಗೂ ಜನಪರ ಚಳುವಳಿಗಳನ್ನು ಸ್ಮರಿಸಿದರು.
ಶಿವಮೊಗ್ಗದ ಗೋಪಿ ಸರ್ಕಲ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಶಾಂತವೇರಿ ಗೋಪಾಲಗೌಡ ಎಚ್. ಗಣಪತಿಯಪ್ಪ ಹಾಗೂ ಕಾಗೋಡು ತಿಮ್ಮಪ್ಪ ಸಮಾನತಾವಾದಿ ಸಮಾಜವನ್ನು ಸೃಷ್ಟಿಸುವ ಹೋರಾಟ ಅಂದರೇ ಉಳುವವನೇ ಹೊಲದೊಡೆಯ ಎಂಬ ಚಳುವಳಿ ಆರಂಭಿಸಿದರು, ಇದರಿಂದಾಗಿ ಸಾವಿರಾರು ಮಂದಿಗೆ ಭೂಮಿಯ ಒಡೆತನ ಸಿಕ್ಕಿತು ಎಂದು ತಿಳಿಸಿದರು. 
ಶಿವಮೊಗ್ಗ ಹಲವು ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ಕೊಡುಗೆ ನೀಡಿದೆ, ಕಡಿದಾಳ್ ಮಂಜಪ್ಪ, ಎಸ್ ಬಂಗಾರಪ್ಪ ಹಾಗೂ ಜೆ.ಎಚ್ ಪಟೇಲ್ ಅಂತ ಸಿಎಂ ಗಳು ಜಿಲ್ಲೆಗೆ ಹೆಮ್ಮೆ ಹಾಗೂ ಗೌರವ ತಂದು ಕೊಟ್ಟಿದ್ದರು, ಆದರೆ ಬಿ.ಎಸ್ ಯಡಿಯೂರಪ್ಪ  ಶಿವಮೊಗ್ಗದ ಘನತೆಗೆ ಕಳಂಕ ಹಚ್ಚಿದರು ಎಂದು ಲೇವಡಿ ಮಾಡಿದರು. 
ಈ ಬಾರಿ ಚುನಾವಣೆಯಲ್ಲಿ ಯಡಿಯೂರಪ್ಪ ಅವರಿಗೆ ಮತ ಹಾಕದಂತೆ ಜನರಲ್ಲಿ ಮನವಿ ಮಾಡಿದ ಸಿಎಂ ಸಿದ್ದರಾಮಯ್ಯ, ಒಂದು ವೇಳೆ ನೀವು ಬಿಜೆಪಿಗೆ ಮತ ನೀಡಿ ಗೆಲ್ಲಿಸಿದರೇ 2008 ಇತಿಹಾಸ ಮರುಕಳಿಸಲಿದೆ, ಮತ್ತೆ ಭ್ರಷ್ಟಾಚಾರ ರಾಜ್ಯದಲ್ಲಿ ತಾಂಡವವಾಡಲಿದೆ ಎಂದು  ಹೇಳಿದ್ದಾರೆ.
ಭ್ರಷ್ಟಾಚಾರಿ ಯಡಿಯೂರಪ್ಪ ಅವರನ್ನು ಬಿಜೆಪಿ ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ ಇದು ರಾಜ್ಯಕ್ಕೆ ಮತ್ತೊಂದು ಶಾಪ ವಾಗಲಿದೆ ಎಂದು ತಿಳಿಸಿದ್ದಾರೆ.
ಇನ್ನೂ ಅಮಿತ್ ಶಾ ವಿರುದ್ದ ವಾಗ್ದಾಳಿ ನಡೆಸಿದ ಸಿದ್ದರಾಮಮಯ್ಯ ಒಂದು ವೇಳೆ ಕುವೆಂಪು ಅವರು ಬದುಕಿದ್ದರೇ ಕೋಮುವಾದಿ ಮನಸ್ಸುಳ್ಳ ಅಮಿತ್ ಶಾ ಅವರನ್ನು ಕವಿಶೈಲ ಪ್ರವೇಶಿಸಲು ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ. 
ಕವಿಶೈಲ ಸರ್ವ ಜನಾಂಗದ ಶಾಂತಿಯ ತೋಟ ಆದರೆ ಬಿಜೆಪಿ ಸಮಾಜದಲ್ಲಿ ಸಮುದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
SCROLL FOR NEXT