ಜೆಡಿಎಸ್ ಸೇರ್ಪಡೆಯಾದ ನಟ ಶಶಿಕುಮಾರ್
ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಟ ಶಶಿಕುಮಾರ್ ಗುರುವಾರ ಕಾಂಗ್ರೆಸ್ ತೊರೆದು ಜ್ಯಾತ್ಯಾತೀತ ಜನತಾ ದಳ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಗುರುವಾರ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪದ್ಮನಾಭನಗರದ ನಿವಾಸಕ್ಕೆ ತೆರಳಿದ ನಟ ಶಶಿಕುಮಾರ್ ಜೆಡಿಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಪಕ್ಷದ ಶಾಲು ಹೊದಿಸಿದ ದೇವೇಗೌಡರು ಶಶಿಕುಮಾರ್ ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಪಕ್ಷ ಸೇರ್ಪಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಕುಮಾರ್, ಕಾಂಗ್ರೆಸ್ ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆ ಹೆಚ್ಚಾಗುತ್ತಿದೆ. ಅರ್ಹರಿಗೆ ಟಿಕೆಟ್ ನೀಡದೆ, ನಂಬಿಸಿ ಕತ್ತು ಕೊಯ್ಯುವ ಕೆಲಸ ನಡೆಯುತ್ತಿದೆ. ಯಾವುದೇ ಪಕ್ಷ ಈ ರೀತಿ ಮಾಡಬಾರದು. ನನ್ನ ಕ್ಷೇತ್ರದ ಜನ ಜೆಡಿಎಸ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಹೇಳುತ್ತಿದ್ದಾರೆ. ಜನರ ಒತ್ತಡಕ್ಕೆ ಮಣಿದು ಮತ್ತು ಪಕ್ಷದ ವರ್ತನೆಯಿಂದ ಬೇಸತ್ತು ಜೆಡಿಎಸ್ ಸೇರ್ಪಡೆಗೊಂಡಿದ್ದೇನೆ. ಈ ಸಂಬಂಧ ಜೆಡಿಎಸ್ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿದ್ದೇನೆ ಎಂದು ಅವರು ಹೇಳಿದರು.
ಇದೇ ವೇಳೆ ಬಿಜೆಪಿ ಸಂಸದ ಶ್ರೀರಾಮುಲು ವಿರುದ್ಧ ಕಿಡಿಕಾರಿದ ಶಶಿಕುಮಾರ್, ಶ್ರೀರಾಮುಲು ಬಳ್ಳಾರಿ ಕ್ಷೇತ್ರದ ಸಂಸದರಾಗಿದ್ದಾರೆ. ಹೀಗಿರುವಾಗ ಮೊಣಕಾಲ್ಮೂರಿಗೆ ಏಕೆ ಬಂದರು ಎಂದು ಪ್ರಶ್ನಿಸಿದರು. ರಾಜಕೀಯವಾಗಿ ಬೆಳೆಯುವ ನಾಯಕರನ್ನು ತುಳಿಯುವ ಹುನ್ನಾರ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಇದು ರಾಜಕೀಯವಾಗಿ ಒಳ್ಳೆಯ ಬೆಳವಣಿಗೆ ಅಲ್ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿದ್ದ ನಟ ಶಶಿಕುಮಾರ್ ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದರು, ಆದರೆ ಕಾಂಗ್ರೆಸ್ ಪಕ್ಷ ಡಾ.ಬಿ.ಯೋಗೇಶ್ ಬಾಬು ಅವರನ್ನು ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ಶಶಿಕುಮಾರ್ ಅವರನ್ನು ಸ್ಟಾರ್ ಪ್ರಚಾರಕರಾಗಿ ಬಳಸಿಕೊಳ್ಳಲು ಮುಂದಾಗಿತ್ತು. ಇದರಿಂದ ಬೇಸತ್ತಿದ್ದ ಶಶಿಕುಮಾರ್ ಇಂದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಇನ್ನು ಜನತಾ ಪರಿವಾರದ ಮೂಲಕವೇ ರಾಜಕೀಯ ಪ್ರವೇಶ ಮಾಡಿದ್ದ ಶಶಿಕುಮಾರ್ 1999ರಲ್ಲಿ ಜನತಾದಳ ಇಬ್ಭಾಗವಾದಾಗ ಜೆ.ಎಚ್.ಪಟೇಲ್ ನೇತೃತ್ವದ ಜೆಡಿಯು ಪಕ್ಷದಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ನಂತರ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಇದಾದ ನಂತರ ಕಾಂಗ್ರೆಸ್ ಪಕ್ಷ ಸೇರಿದ್ದರು. ಶಶಿಕುಮಾರ್ ಅವರು 2008ರ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಳ್ಳಕೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 42,302 ಮತಗಳನ್ನು ಪಡೆದು ಬಿಜೆಪಿಯ ತಿಪ್ಪೇಸ್ವಾಮಿ ಅವರ ವಿರುದ್ಧ ಸೋಲು ಕಂಡಿದ್ದರು.