ಬೆಂಗಳೂರು: ಸಿದ್ದರಾಮಯ್ಯ ಅವರ 2ನೇ ಕ್ಷೇತ್ರ ಎನ್ನಲಾಗುತ್ತಿರುವ ಬಾದಾಮಿ ಕ್ಷೇತ್ರದಲ್ಲಿನ ಸ್ಪರ್ಧೆ ಕುರಿತು ಗೊಂದಲ ಮುಂದುವರೆದಿರುವಂತೆಯೇ ಅತ್ತ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರ ಫೇಸ್ ಬುಕ್ ಪೋಸ್ಟ್ ಒಂದು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಚಾಮುಂಡೇಶ್ವರಿ ಕ್ಷೇತ್ರ ಅಲ್ಲದೇ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂಬ ವಿಚಾರಕ್ಕೆ ಸಂಬಂದಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಮುಂದುವರೆದಿರುವಂತೆಯೇ ಇತ್ತ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾಯತೀಂದ್ರ ಸಿದ್ದರಾಮಯ್ಯ ಅವರ ಹೆಸರಿನ ಫೇಸ್ ಬುಕ್ ಖಾತೆಯೊಂದರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಏಪ್ರಿಲ್ 23ಕ್ಕೆ ಬಾದಾಮಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡುತ್ತಾರೆ ಎಂದು ಬರೆಯಲಾಗಿದೆ. ಈ ಪೋಸ್ಟ್ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದ್ದು, ಅಷ್ಟರೊಳಗಾಗಿಯೇ ಈ ಪೋಸ್ಟ್ ನ ಸ್ಕ್ರೀನ್ ಶಾಟ್ ಗಳು ವ್ಯಾಪಕ ವೈರಲ್ ಆಗಿವೆ.
ಇನ್ನು ಸಿಎಂ ಸಿದ್ದರಾಮ್ಯಯ 2ನೇ ಕ್ಷೇತ್ರವಾಗಿ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆಯೋ ಇಲ್ಲವೋ ಎಂಬ ವಿಚಾರದ ಕುರಿತು ಇನ್ನೂ ಪೂರ್ಣ ಸ್ಪಷ್ಟತೆ ದೊರೆತಿಲ್ಲ, ಸ್ವತಃ ಸಿದ್ದರಾಮಯ್ಯ ಅವರೂ ಕೂಡ ಈ ಬಗ್ಗೆ ಸ್ಪಷ್ಟವಾದ ಹೇಳಿಕೆ ನೀಡುತ್ತಿಲ್ಲ. ಇಂದು ಚಾಮುಂಡೇಶ್ವರಿಯಲ್ಲಿ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, 'ಬಾದಾಮಿಯಲ್ಲಿ ಸ್ಪರ್ಧೆ ಮಾಡಲ್ಲ ಎಂದರೂ ಕ್ಷೇತ್ರದ ಜನರು ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ. ಅಲ್ಲದೇ ಬಾಗಲಕೋಟೆ, ವಿಜಯಪುರ ಜಿಲ್ಲೆಯವರು ತಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಈ ಕುರಿತು ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ಮೈಸೂರಿನ ಮಾಧ್ಯಮ ಸಂವಾದಲ್ಲಿ ಹೇಳಿದರು. ಸಿದ್ದರಾಮಯ್ಯ ಅವರ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರ ಹೈಕಮಾಂಡ್ ನಿರ್ಧಾರ ಮಾಡಲಿದೆ ಎನ್ನಲಾಗಿದೆ.
ಅಂತೆಯೇ ‘ನಾನು ಎರಡು ಕಡೆ ಸ್ಪರ್ಧಿಸಬೇಕೋ, ಬೇಡವೋ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ನಾನು ಹೈಕಮಾಂಡ್ ಅಲ್ಲ. ಈ ರಾಜ್ಯದ ಮುಖ್ಯಮಂತ್ರಿ ಅಷ್ಟೆ. ಬಾದಾಮಿ ಕ್ಷೇತ್ರದ ಸ್ಪರ್ಧೆಯ ವಿಚಾರ ಈ ತಿಂಗಳ 23 ಅಥವಾ 24ರಂದು ಬಗೆಹರಿಯಲಿದೆ. ನನಗೆ ಮತ್ತು ಬಾದಾಮಿ ಕ್ಷೇತ್ರದ ಜನರಿಗೆ ಯಾವುದೇ ಗೊಂದಲ ಇಲ್ಲ. ಮಾಧ್ಯಮದವರು ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos