ಬೆಂಗಳೂರು: ಕಾಂಗ್ರೆಸ್ ಪಾಲಿಗೆ ಮಂಡ್ಯ ವಿಧಾನಸಭಾ ಕ್ಷೇತ್ರ ಇದೀಗ ಕಬ್ಬಿಣದ ಕಡಲೆಯಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದ್ದು, ಮಂಡ್ಯದಲ್ಲಿ ನಟ ಅಂಬರೀಶ್ ಮೂಲಕ ಭದ್ರಕೋಟೆ ನಿರ್ಮಾಣ ಮಾಡಿಕೊಂಡಿದ್ದ ಕಾಂಗ್ರೆಸ್ ಗೆ ಅಂಬಿ ಕೈ ಕೊಟ್ಟರೇ ಎಂಬ ಮಾತುಗಳು ಕೇಳಿಬರುತ್ತಿವೆ.
ಇಂತಹುದೊಂದು ಅನುಮಾನಕ್ಕೆ ನಟ, ರಾಜಕಾರಣಿ ಅಂಬರೀಶ್ ಅವರ ನಡೆ ಕಾರಣವಾಗಿದ್ದು, ಹೈಕಮಾಂಡ್ ಮಂಡ್ಯ ಕ್ಷೇತ್ರದಿಂದ ಟಿಕೆಟ್ ನೀಡಿದರೂ ಅಂಬರೀಶ್ ಮಾತ್ರ ನಾಯಕರ ಕೈಗೆ ಸಿಗದೆ ಒಡಾಡುತ್ತಿದ್ದಾರೆ. ಹೀಗಾಗಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಶಾಸಕ ಅಂಬರೀಶ್ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುತ್ತಾರೋ ಅಥವಾ ಇಲ್ಲವೂ ಎನ್ನುವ ಕುತೂಹಲ ಮನೆ ಮಾಡಿದೆ. ಟಿಕೆಟ್ ನೀಡಿದ್ದರೂ ಬಿ. ಫಾರಂ ಪಡೆದಯದೆ ಜಿದ್ದಾ ಜಿದ್ದಿಗೆ ಬಿದ್ದಿರುವ ಅಂಬರೀಶ್ ಅವರನ್ನು ಮನವೊಲಿಸುವ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ.
ಹೀಗಾಗಿ ಅಂಬರೀಶ್ ಅವರನ್ನು ಹೊರತು ಪಡಿಸಿ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲೂ ಕೂಡ ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಮೂರು ಅಭ್ಯರ್ಥಿಗಳ ಹೆಸರನ್ನೂ ಕೂಡ ಸಿದ್ಧಪಡಿಸಿಟ್ಟುಕೊಂಡಿದೆ. ಆದರೆ ಅಂಬರೀಶ್ ಅವರಗೆ ನೀಡಿರುವ ಟಿಕೆಟ್ ಅನ್ನು ಈಗ ಬೇರೆಯವರಿಗೆ ನೀಡಿದರೆ ಜಿಲ್ಲೆಯಲ್ಲಿ ಪಕ್ಷದ ಪರ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕೆ ಮತ್ತೆ ಕಾಂಗ್ರೆಸ್ ಬೇರೆ ಅಭ್ಯರ್ಥಿ ಘೋಷಣೆ ಮಾಡಲು ಹಿಂದೇಟು ಹಾಕುತ್ತಿದೆ.
ಇನ್ನು ಮಂಡ್ಯದಲ್ಲಿ ಅಂಬಿ ಹೊರತಾಗಿ ಕಾಂಗ್ರೆಸ್ ಬಾವುಟ ಹಾರಿಸಬಲ್ಲ ಮತ್ತೊಬ್ಬ ಪ್ರಮುಖ ನಾಯಕರಿಲ್ಲ ಎಂಬುದು ಪಕ್ಷದ ಚಿಂತೆಗೆ ಕಾರಣ. ಪ್ರಸ್ತುತ ಜೆಡಿಎಸ್ ನಲ್ಲಿದ್ದ ಚೆಲುವರಾಯಸ್ವಾಮಿ ಈಗಷ್ಟೇ ಕಾಂಗ್ರೆಸ್ ಗೆ ಬಂದಿದ್ದಾರೆಯಾದರೂ, ಚೆಲುವರಾಯಸ್ವಾಮಿ ಜೆಡಿಎಸ್ ಮತಗಳು ಕಾಂಗ್ರೆಸ್ ಗೆ ಬೀಳುತ್ತವೆ ಎಂದು ಹೇಳಲು ಸಾದ್ಯವಿಲ್ಲ. ಮಂಡ್ಯದ ಒಟ್ಟು 7 ವಿಧಾನಸಭಾ ಕ್ಷೇತ್ರಗಳ ಪೈಕಿ ಅಂಬರೀಶ್ ಅವರಿಂದಾಗಿಯೇ ಕಾಂಗ್ರೆಸ್ 2ರಲ್ಲಿ ತನ್ನ ಅಧಿಪತ್ಯ ಸಾಧಿಸಿದೆ. ಒಂದು ಮಂಡ್ಯ ವಿಧಾನಸಭಾ ಕ್ಷೇತ್ರ ಮತ್ತು ಮಳವಳ್ಳಿ ವಿಧಾನಸಭಾ ಕ್ಷೇತ್ರ. ಇನ್ನು ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅಂಬರೀಶ್ ಬರೊಬ್ಬರಿ 42,937 ಮತಗಳ ಅಂತರದಿಂದ ತಮ್ಮ ಎದುರಾಳಿ ಜೆಡಿಎಸ್ ಅಭ್ಯರ್ಥಿ ಶ್ರೀನಿವಾಸ್ ಅವರನ್ನು ಸೋಲಿಸಿದ್ದರು. ಅಂಬಿ ಒಟ್ಟು 90,329 ಮತಗಳಿಸಿದರೆ, ಎಂ ಶ್ರೀನಿವಾಸ್ 47,392 ಮತಗಳನ್ನು ಪಡೆದಿದ್ದರು.
ಏತನ್ಮಧ್ಯೆ ನಟ ಅಂಬರೀಶ್ ಕಾಂಗ್ರೆಸ್‌ಗೆ ’ಕೈ’ ಕೊಟ್ಟು ತೆನೆ ಹೊರಲಿದ್ದಾರೆ ಎನ್ನುವ ವದಂತಿಗಳು ಹಬ್ಬಿವೆ. ಜೆಡಿಎಸ್ ನಲ್ಲಿದ್ದ ಮಂಡ್ಯದ ರೆಬೆಲ್ ಶಾಸಕರು ಇದೀಗ ಕಾಂಗ್ರೆಸ್ ಗೆ ಬಂದಿದ್ದು, ಇದು ಅಂಬರೀಶ್ ಅವರ ಪ್ರಮುಖ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ ಹಾಲಿ ಚುನಾವಣೆಯಲ್ಲಿ ತಮಗದಲ್ಲದೇ ತಮ್ಮ ಇತರೆ ಮೂವರು ಬೆಂಬಲಿಗರಿಗೂ ಅಂಬಿ ಟಿಕೆಟ್ ಕೇಳಿದ್ದರು. ಆದರೆ ಅಂಬಿಗೆ ಟಿಕೆಟ್ ನೀಡಿರುವ ಕಾಂಗ್ರೆಸ್ ಅವರ ಬೆಂಬಲಿಗರಿಗೆ ಟಿಕೆಟ್ ನೀಡಿಲ್ಲ ಎಂಬುದು ಅಂಬಿ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
ಇದೇ ಕಾರಣಕ್ಕೆ ಅಂಬರೀಶ್, ಕಾಂಗ್ರೆಸ್‌ಗೆ ಕೈ ಕೊಟ್ಟು ಜೆಡಿಎಸ್ ಸೇರಲಿದ್ದಾರೆ ಎನ್ನುವ ವದಂತಿಗಳು ಹರಿದಾಡುತ್ತಿವೆ. ಈ ಕಾರಣಕ್ಕೆ ಕಾಂಗ್ರೆಸ್ ನಾಯಕರಿಗೆ ಸಿಗದಂತೆ ಓಡಾಡುತ್ತಿದ್ದು, ಇಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿರುವ ಹಿನ್ನೆಲೆಯಲ್ಲಿ ಅಂಬರೀಶ್ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುತ್ತಾರೋ ಇಲ್ಲವೋ ಜೆಡಿಎಸ್ ಸೇರುತ್ತಾರೋ ಎನ್ನುವುದು ಕುತೂಹಲ ಕೆರಳಿಸಿದೆ. ಇತ್ತ ಅಂಬರೀಶ್ ಅವರ ಮೌನ ಅವರ ಬೆಂಬಲಿಗರು ಹಾಗು ಅಭಿಮಾನಿಗಳಲ್ಲಿ ತಳಮಳ ಸೃಷ್ಠಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics