ನವದೆಹಲಿ: ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರು ಬಿಎಸ್ ವೈ ಮತ್ತು ರೆಡ್ಡಿ ಸಹೋದರರ ವಿರುದ್ಧ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದ್ದರು, ಇದರ ಬೆನ್ನಲ್ಲೇ ಇದೀಗ ಎಐಎಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಬಿಜೆಪಿ ಮತ್ತು ರೆಡ್ಡಿ ಸಹೋದರರ ವಿರುದ್ಧ ಟ್ವಿಟರ್ ವಾರ್ ಮುಂದುವರೆಸಿದ್ದಾರೆ.
ಟ್ವಿಟರ್ ನಲ್ಲಿ ರೆಡ್ಡಿ ಸಹೋದರರು ಮತ್ತು ಬಿಜೆಪಿ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿರುವ ರಾಹುಲ್ ಗಾಂಧಿ, ರೆಡ್ಡಿ ಸಹೋದರರು ಮತ್ತು ಬಿಎಸ್ ಯಡಿಯೂರಪ್ಪ ಗಣಿ ಸಂಪತ್ತನ್ನು ಲೂಟಿ ಮಾಡಿದರು. ನಮ್ಮ ಸರ್ಕಾರ ಅವರನ್ನು ಜೈಲಿಗಟ್ಟಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅವರನ್ನು ಜೈಲಿನಿಂದ ಹೊರಗೆ ತರುವ ಪ್ರಯತ್ನ ಮಾಡಿದೆ. ಅಲ್ಲದೆ ಅವರ ಪೈಕಿ 8 ಮಂದಿಗೆ ಟಿಕಟ್ ಕೂಡ ಕರ್ನಾಟಕ ವಿಧಾನಸಭೆಗೆ ಕಳುಹಿಸಲು ಪ್ರಯತ್ನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ನಡೆ ಪ್ರಾಮಾಣಿಕ ಪ್ರಜೆಗೆ ಮಾಡುತ್ತಿರುವ ಅಪಮಾನವಾಗಿದ್ದು, ಬಸವಣ್ಣನವರ ತತ್ಪಾದರ್ಶಗಳಿಗೆ ತೋರುತ್ತಿರುವ ಅಗೌರವವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇನ್ನು ನಿನ್ನೆಯಷ್ಟೇ ಇದೇ ವಿಚಾರವಾಗಿ ಟ್ವೀಟ್ ಸಮರ ಆರಂಭಿಸಿದ್ದ ಸಿಎಂ ಸಿದ್ದರಾಮಯ್ಯ, ರಾಜ್ಯದ ಗಣಿ ಸಂಪತನ್ನು ಲೂಟಿ ಮಾಡಿದ ಬಳ್ಳಾರಿ ಗಣಿ ಧಣಿಗಳ ಗ್ಯಾಂಗ್ ರಕ್ಷಣೆಗೆ ಮೋದಿ ಸರ್ಕಾರ ಧಾವಿಸಿದೆ. ರಾಜ್ಯದ ಸುಮಾರು 35 ಸಾವಿರ ಕೋಟಿ ಗಣಿ ಸಂಪತ್ತನ್ನು ಲೂಟಿ ಮಾಡಿದ ಬಳ್ಳಾರಿ ರೆಡ್ಡಿಗಳಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ಕನ್ನಡಿಗರಿಗೆ ಬಿಜೆಪಿ ದ್ರೋಹ ಮಾಡಿದೆ. ಮೋದಿ ಸರ್ಕಾರ ಸಿಬಿಐ ಮೂಲಕ ಗಣಿ ಧಣಿಗಳನ್ನು ರಕ್ಷಣೆ ಮಾಡುತ್ತಿದೆ ಎಂದು ಕಿಡಿಕಾರಿದ್ದರು.
ಅಂತೆಯೇ 2008-12ರಲ್ಲಿದ್ದ ರಾಜಕೀಯ ಪರಿಸ್ಥಿತಿಗಳನ್ನುನೆನಪಿಸಿಕೊಂಡಿರುವ ಸಿದ್ದರಾಮಯ್ಯ, 2008ರಿಂದ 12ರವರೆಗೆ ಬಳ್ಳಾರಿಯನ್ನು ರೆಡ್ಡಿಗಳು ತಮ್ಮ ಗಣರಾಜ್ಯವನ್ನಾಗಿರಿಸಿಕೊಂಡಿದ್ದರು. ಆಪರೇಷನ್ ಕಮಲದ ಮೂಲಕ ಶಾಸಕರನ್ನು ರೆಸಾರ್ಟ್ ನಲ್ಲಿ ಕೂಡಿ ಹಾಕಿ ರಾಜ್ಯದ 35 ಸಾವಿರ ಕೋಟಿ ರು ಮೌಲ್ಯದ ಗಣಿ ಸಂಪತ್ತನ್ನು ಲೂಟಿ ಮಾಡಿದರು. ಕರ್ನಾಟಕಕ್ಕೆ ದೇಶದ ಅತ್ಯಂತ ಭ್ರಷ್ಟರಾಜ್ಯ ಎಂಬ ಕುಖ್ಯಾತಿ ತಂದುಕೊಟ್ಟಿದ್ದರು. ಇದೀಗ ಮತ್ತೆ ಕರ್ನಾಟಕವನ್ನು ಲೂಟಿ ಮಾಡಲು ಅವರನ್ನು ಕರೆತಂದಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.