ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಕಾಂಗ್ರೆಸ್ ಸಚಿವರಿಗಾಗಿ ಔತಣಕೂಟ ಏರ್ಪಡಿಸಿದ್ದರು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಸಚಿವರಿಗೆ ಭೋಜನ ಕೂಟ ಆಯೋಜಿಸಿದ್ದರು.
ಕಾವೇರಿ ನಿವಾಸದಲ್ಲಿ ಆಯೋಜಿಸಿದ್ದ ಔತಣಕೂಟ ಮೇಲ್ನೋಟಕ್ಕೆ ಗೆಟ್ ಟುಗೆದರ್ ನಂತೆ ಕಾಣಿಸಿದರೂ ಸಿದ್ದರಾಮಯ್ಯ ಅವರ ತಂತ್ರಗಾರಿಕೆ ಬೇರೆಯೇ ಆಗಿದೆ ಎಂದು ಮೂಲಗಳು ತಿಳಿಸಿವೆ, ಸಿದ್ದರಾಮಯ್ಯ ಆಯೋಜಿಸಿದ್ದ ಭೋಜನ ಕೂಟದಲ್ಲಿ 16 ಸಚಿವರು ಪಾಲ್ಗೊಂಡಿದ್ದರು, ಈ ವೇಳೆ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ಬಗ್ಗೆ ಎಲ್ಲರಿಂದಲೂ ಫೀಡ್ ಬ್ಯಾಕ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಎಲ್ಲಾ ಇಲಾಖೆಗಳು ಯಾವುದೇ ಅಡೆತಡೆಯಿಲ್ಲದೇ ಸುಲಭವಾಗಿ ನಡೆದುಕೊಂಡು ಹೋಗುತ್ತಿವೆಯೇ ಎಂಬ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ.
ಜೆಡಿಎಸ್ ಸಚಿವ ಎಚ್.ಡಿ ರೇವಣ್ಣ ಎಲ್ಲಾ ಇಲಾಖೆಗಳಲ್ಲೂ ಮೂಗು ತೂರಿಸುತ್ತಿದ್ದಾರೆ ಹಾಗೂ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಗುಸುಗುಸು ಬಗ್ಗೆಯೂ ಸಿದ್ದರಾಮಯ್ಯ ಸಚಿವರ ಬಳಿ ವಿಚಾರಿಸಿಕೊಂಡಿದ್ದಾರೆ.
ನಡೆಯುತ್ತಿರುವ ಯೋಜನೆಗಳಿಗೆ ಅನುದಾನ ನೀಡಿಕೆ, ಮುಂದಿನ ನಿಗಮ-ಮಂಡಳಿ ನೇಮಕದ ಬಗ್ಗೆಯೂ ಈ ವೇಳೆ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ, ಜೊತೆಗೆ ಸಮ್ಮಿಶ್ರ ಸರ್ಕಾರದ ಬಗ್ಗೆ ಮಾಧ್ಯಮಗಳಿಗೆ ಇರುವ ಚಿತ್ರಣದ ಬಗ್ಗೆಯೂ ಚರ್ಚಿಸಲಾಯಿತು.
ಸಚಿವ ಪುಟ್ಟರಂಗ ಶೆಟ್ಟಿ ಸಿದ್ದರಾಮಯ್ಯ ಆಯೋಜಿಸಿದ್ದ ಭೋಜನಕೂಟಕ್ಕೆ ತಡವಾಗಿ ಬಂದರು, ಸಚಿವರಿಂದ ಫೀಡ್ ಬ್ಯಾಕ್ ಪಡೆದುಕೊಂಡಿರುವ ಸಿದ್ದರಾಮಯ್ಯ ಮುಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಯಾವ್ಯಾವ ವಿಷಯದ ಬಗ್ಗೆ ಚರ್ಚೆ ನಡೆಸಬೇಕು, ಸಮ್ಮಿಶ್ರ ಸರ್ಕಾರ ನಯವಾಗಿ ಆಡಳಿತ ನಡೆಸಿಕೊಂಡು ಹೋಗಲು ಮಾಡಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಈ ಭೋಜನ ಕೂಟ ಆಯೋಜಿಸಲಾಗಿತ್ತು ಎಂದು ಮೂಲಗಳು ತಿಳಿದು ಬಂದಿವೆ.