ತುಮಕೂರು: ಸಮ್ಮಿಶ್ರ ಸರಕಾರ ನಡೆಸುವುದು ಕಠಿಣ ತುಂಬಾ ಕಷ್ಟದ ಕೆಲಸ. ಆದರೂ ರಾಜ್ಯದ ಜನರ ಒಳಿತಿಗಾಗಿ ನೋವುಗಳನ್ನು ನುಂಗಿಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.
ಮಾಧ್ಯಮವೊಂದರ ವರದಿಯಂತೆ, ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯ 76ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಪರಮೇಶ್ವರ ಅವರು, ಸರ್ಕಾರ ರಚನೆಯ ವೇಳೆಯಲ್ಲಿ ಜೆಡಿಎಸ್ ಗೆ ನಾವು ರಾಜಕೀಯವಾಗಿ ಷರತ್ತು ಹಾಕಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ರೂಪಿಸಿರುವ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ ಅಂತಹ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಆಂತರಿಕ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೂ ಸಮ್ಮಿಶ್ರ ಸರ್ಕಾರ ನಡೆಸೋದು ಕಠಿಣ. ರಾಜ್ಯದ ಆಡಳಿತದ ದೃಷ್ಟಿಯಿಂದ ಎಲ್ಲವನ್ನು ಸಹಿಸಿಕೊಂಡು ಸರ್ಕಾರ ನಡೆಸುತ್ತಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಆರ್ ಎಸ್ ಎಸ್ ವಿರುದ್ಧ ಕಿಡಿಕಾರಿದ ಪರಮೇಶ್ವರ ಅವರು, ಆರ್ ಎಸ್‍ಎಸ್ ನವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಹಾಗಾಗಿ ಅವರಿಗೆ ಕ್ವಿಟ್ ಇಂಡಿಯಾ ಚಳವಳಿ ಗೊತ್ತೆ ಇಲ್ಲ. ಅಂತಹವರು ಕಾಂಗ್ರೆಸ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ.ಆರ್ ಎಸ್‍ಎಸ್‌ನವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿಲ್ಲ ಅನ್ನೋದಕ್ಕೆ ನಮ್ಮಲ್ಲಿ ಪುರಾವೆಗಳಿವೆ. ಸ್ವಾತಂತ್ರ್ಯದ ಅರಿವಿಲ್ಲದವರು ಇಂದು ನಮ್ಮ ಕಾಂಗ್ರೆಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
ಅಂತೆಯೇ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಯಾವುದೇ ಪಕ್ಷದ ಜತೆ ಮೈತ್ರಿ ಇಲ್ಲ. ನಮ್ಮ ಪಕ್ಷದ ಅಡಿಯಲ್ಲೇ ಸ್ಥಳೀಯ ಸಂಸ್ಥೆಯ ಚುನಾವಣೆ ಎದುರಿಸುತ್ತೇವೆ ಎಂದೂ ಪರಮೇಶ್ವರ್ ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos