ರಾಜಕೀಯ

ಸಿದ್ದರಾಮಯ್ಯ ಕೆಲಸ ಮಾಡಿ ತೋರಿಸಿದ್ದಾರೆ, ಮೋದಿಯವರೇ, ನೀವು ಯಾವಾಗ ಕೆಲಸ ಆರಂಭಿಸುತ್ತೀರಿ?: ರಾಹುಲ್ ಗಾಂಧಿ

Lingaraj Badiger
ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಆದರೆ ಸದಾ ಸುಳ್ಳು ಭರವಸೆಗಳನ್ನು ನೀಡುವ ಪ್ರಧಾನಿ ನರೇಂದ್ರ ಮೋದಿಯವರೇ ನೀವು ಯಾವಾಗ ಕೆಲಸ ಆರಂಭಿಸುತ್ತೀರಿ? ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 
ಇಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಸಂಕಷ್ಟದ ಪರಿಸ್ಥಿತಿಯಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದಾರೆ. ಮೋದಿಯವರೇ ನೀವು ಸಿದ್ದರಾಮಯ್ಯ ಅವರನ್ನು ನೋಡಿ ಕಲಿಯಿರಿ ಎಂದರು. 
ಯಾರು ನಿಜ ಹೇಳುತ್ತಾರೋ ಅವರ ಮೇಲಷ್ಟೇ ನೀವು ನಂಬಿಕೆ ಇಟ್ಟುಕೊಳ್ಳಬೇಕು. ಸುಳ್ಳು ಭರವಸೆ ನೀಡುವವರ ಮೇಲೆ ನಂಬಿಕೆ ಇಡುವುದರಿಂದ ಯಾವುದೇ ಉಪಯೋಗವಿಲ್ಲ. ಕಾಂಗ್ರೆಸ್ ಸತ್ಯದ ಪರವಾಗಿದೆ. ಹೇಳಿದ್ದನ್ನು ಮಾಡಿ ತೋರಿಸುವ ಕೆಲಸ ಕಾಂಗ್ರೆಸ್ ರಾಜ್ಯದಲ್ಲಿ ಮಾಡಿದೆ. ಕೆಲ ಉದಾಹರಣೆ ನೀಡಿ ಕಾಂಗ್ರೆಸ್ ಹೇಳಿದ್ದನ್ನು ಮಾಡಿ ತೋರಿಸುತ್ತದೆ ಎಂಬುವುದನ್ನು ಸಾಬೀತುಪಡಿಸುತ್ತೇನೆ. ಮೋದಿ ಹೇಳುವುದೆಲ್ಲಾ ಸುಳ್ಳು ಎಂಬುವುದನ್ನೂ ನಾನು ನಿಮಗೆ ಸಾಬೀತುಪಡಿಸುತ್ತೇನೆ ಎಂದರು.
ಹೈದರಾಬಾದ್ ಕರ್ನಾಟಕಕ್ಕೆ 371 ಜೆ ಜಾರಿಗೆ ತಂದಿದ್ದೆ ಕಾಂಗ್ರೆಸ್ ಸರ್ಕಾರ. ಯುಪಿಎ ಸರ್ಕಾರವಿದ್ದಾಗ ಮೊದಲು ನಾನು ಹಾಗೂ ಸೋನಿಯಾ ಗಾಂಧಿಯವರು ಸಂವಿಧಾನ ತಿದ್ದುಪಡಿಗೆ ಬೆಂಬಲ ನೀಡಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಮಾಡಿ, ನಮ್ಮ ಮಾತು ಉಳಿಸಿಕೊಂಡಿದ್ದೇವೆ. ಆದರೆ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಇದನ್ನು ಮಾಡಲು ಸಾಧ್ಯವಿಲ್ಲವೆಂದಿದ್ದರು, ಮರೆತು ಬಿಡಿ ಎಂದಿದ್ದರು. ಆದರೆ ನಾವಿದನ್ನು ಪೂರ್ಣಗೊಳಿಸಿದ್ದೇವೆ. ಈ ಮೂಲಕ 350 ಕೋಟಿ ಬರುತ್ತಿದ್ದ ಅನುದಾನ ತಿದ್ದುಪಡಿ ಬಳಿಕ 4 ಸಾವಿರ ಕೋಟಿಗೆ ಏರಿಕೆಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಕಳೆದ ವಾರ ಸಂಸತ್ತಿನಲ್ಲಿ ಒಂದು ಗಂಟೆ ಭಾಷಣ ಮಾಡಿದ ಪ್ರಧಾನಿ ಮೋದಿ, ನಗರವಾಸಿಗಳೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಕುರಿತಾಗಿ ಅವರು ಎಲ್ಲೂ ಬಾಯಿ ಬಿಡಲಿಲ್ಲ. ಭಾರತದ ಯುವಕಗಗೆ ಉದ್ಯೋಗ ಕೊಡುವ ಮಾತುಗಳಿರಲಿಲ್ಲ. ರೈತರಿಗೆ ಸಹಾಯ ಮಾಡುವ ಮಾತಿರಲಿಲ್ಲ. ಒಂದು ಗಂಟೆಯನ್ನು ಅವರು ಕಾಂಗ್ರೆಸ್ ಪಕ್ಷ ಹಾಗೂ ಹಿಂದೆ ಏನೇನು ನಡೆದಿದೆ ಎಂಬುವುದನ್ನು ನೆನಪಿಸಿ ಟೀಕೆ ಮಾಡುವುದರಲ್ಲೇ ಕಳೆದಿದ್ದೀರಿ, ಸಮಸ್ಯೆ ಕುರಿತಾಗಿ ಒಂದು ಮಾತೂ ಆಡಿಲ್ಲ ಎಂದು ರಾಹುಲ್ ಕಿಡಿಕಾರಿದರು.
SCROLL FOR NEXT