ರಾಯಚೂರು: ರಾಜ್ಯದಲ್ಲಿ ಕಾಂಗ್ರೆಸ್ ಜನಾಶೀರ್ವಾದ ರ್ಯಾಲಿಯಲ್ಲಿ ತೊಡಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜಕೀಯದಲ್ಲಿ ಭರವಸೆ ಮತ್ತು ನಿಯತ್ತು ಬಹಳ ಮುಖ್ಯ. ನಮ್ಮ ನಿಯತ್ತು ಸರಿಯಿಲ್ಲ ಅಂದರೆ ಯಾವ ಕೆಲಸವೂ ಆಗುವುದಿಲ್ಲ. ನಮ್ಮ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸು ನಿಯತ್ತಾಗಿದೆ. 70 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಮುಂದಾದಾಗ ಇದು ಸಾಧ್ಯವಿಲ್ಲ ಎಂದಿದ್ದರು. ಆದರೆ ಅದನ್ನು ನಾವು ಮಾಡಿ ತೋರಿಸಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಸಿಂಧನೂರಿನಲ್ಲಿ ನಡೆದ ಜನಾಶೀರ್ವಾದ ಸಮಾವೇಶದಲ್ಲಿ ರೈತರ ಜತೆ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕದ ರೈತರು ಅನುಭವಿಸುವ ಸಮಸ್ಯೆಯನ್ನೇ ಉತ್ತರಪ್ರದೇಶದ ರೈತರೂ ಅನುಭವಿಸುತ್ತಿದ್ದಾರೆ. ಉತ್ತರ ಪ್ರದೇಶದ ರೈತರು ನನಗೆ ಪ್ರಶ್ನೆ ಮಾಡಿದರು. ಕೇಂದ್ರ ಸರ್ಕಾರ ದೊಡ್ಡ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡುತ್ತದೆ. ಕಳೆದ ವರ್ಷ ಬಂಡವಾಳ ಶಾಹಿಗಳ 1 ಲಕ್ಷ 30 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರ ಸಾಲವನ್ನೇಕೆ ಮನ್ನಾ ಮಾಡುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ ಎಂದರು.
ಇನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದ್ದಾರೆ. ಅದೇ ರೀತಿ ಕೇಂದ್ರ ಸರ್ಕಾರ ಯಾಕೆ ಸಾಲ ಮನ್ನಾ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಸರ್ಕಾರದ ಜವಾಬ್ದಾರಿ ಜನರಿಗೆ ಬೆಂಬಲ ಕೊಡುವುದು. ಪ್ರಕೃತಿ ವಿಕೋಪವಾದಾಗ ರಕ್ಷಣೆಗೆ ಬರುವುದು. ಅದರಂತೆ ಕಾಂಗ್ರೆಸ್ ಸರ್ಕಾರ ರೈತರಿಗೆ ಒಳ್ಳೆಯದನ್ನೇ ಮಾಡಿದೆ ಅಂತ ಧೈರ್ಯವಾಗಿ ಹೇಳುತ್ತೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ಬೇಕಾದ ಕೆಲಸ ಮಾಡುತ್ತಿಲ್ಲ. ನಾವು ರೈತರನ್ನು ದೇಶದ ಬೆನ್ನೆಲುಬು ಅಂತ ತಿಳಿದುಕೊಂಡಿದ್ದೇವೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಡುವುದು ನಮ್ಮ ಉದ್ದೇಶ ಎಂದರು.