ರಾಜಕೀಯ

ಸಣ್ಣ ಅಪರಾಧಗಳಿಗೆ ರೌಡಿ ಶೀಟರ್ ಎಂದು ಪರಿಗಣಿಸಲು ಸಾಧ್ಯವಿಲ್ಲ: ರಾಮಲಿಂಗಾ ರೆಡ್ಡಿ

Shilpa D
ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರನ ಹಲ್ಲೆ ಪ್ರಕರಣದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ, ಆದರೆ ಸಣ್ಣ ಅಪರಾಧಗಳಿಗೆ ರೌಡಿ ಶೀಟರ್ ಎಂಬುದಾಗಿ ಪರಿಗಣಿಸಲಾಗದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ,
ರೌಡಿ ಶೀಟರ್ ಎಂದು ಪರಿಗಣಿಸಲು ಹಿಂದೇಟು ಏಕೆ ಎಂಬ ಪ್ರಶ್ನೆಗೆ, ಉತ್ತರಿಸಿದ ಅವರು‘ಈ ಹಿಂದೆ ನಲಪಾಡ್ ವಿರುದ್ಧ ಯಾರೂ ದೂರು ದಾಖಲಿಸಿರಲಿಲ್ಲ. ದೂರು ದಾಖಲಿಸಿದ್ದರೆ ಕ್ರಮ ಕೈಗೊಳ್ಳುತ್ತಿದ್ದೆವು.  ಸಣ್ಣ ತಪ್ಪು ಮಾಡಿದವರ ಮೇಲೆಲ್ಲಾ ರೌಡಿ ಶೀಟರ್ ಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.
ವಿದ್ವತ್ ಮೇಲಿನ ಹಲ್ಲೆ ಪ್ರಕರಣ ಸಣ್ಣ ಅಪರಾಧವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರ ಮೇಲೆ ರೌಡಿ ಶೀಟ್ ಹಾಕಬೇಕು ಎಂಬುದನ್ನು ಪೊಲೀಸರು ನಿರ್ಧರಿಸುತ್ತಾರೆ, ನಾನು ಅಧಿಕಾರ ವಹಿಸಿಕೊಂಡ ದಿನವೇ ಗೂಂಡಾ ಕಾಯ್ದೆ, ರೌಡಿಶೀಟ್ ಹಾಗೂ ಗಡಿಪಾರು ಮಾಡುವ ತೀರ್ಮಾನದ ವಿಷಯದಲ್ಲಿ ಮುಕ್ತ ತೀರ್ಮಾನ ತೆಗೆದುಕೊಳ್ಳಿ ಎಂದು ಪೊಲೀಸರಿಗೆ ಸೂಚಿಸಿದ್ದೇನೆ’ ಎಂದರು.
ನಲಪಾಡ್ ಬೆದರಿಕೆ ಹಾಕಿದ್ದ, ಪೊಲೀಸರು ದೂರು ಸ್ವೀಕರಿಸಲಿಲ್ಲ ಎಂದು ಪೂರ್ಣಿಮಾ ಎಂಬ ಮಹಿಳೆ ಫೇಸ್‌ಬುಕ್‌ನಲ್ಲಿ ವಿಡಿಯೊ ಹಾಕಿದ್ದಾರಲ್ಲ’ ಎಂಬ ಮತ್ತೊಂದು ಪ್ರಶ್ನೆಗೆ, ‘ಅವರು ದೂರು ಕೊಡಲು ಹೋದಾಗ ನಾನು ಗೃಹ ಸಚಿವನಲ್ಲ. ನಾನು ಪ್ರತಿನಿಧಿಸುವ ಬಿಟಿಎಂ ಲೇಔಟ್ ಮತ ಕ್ಷೇತ್ರದಲ್ಲಿ ಅವರು ವಾಸಿಸುತ್ತಿದ್ದಾರೆ. ನನ್ನನ್ನು ಭೇಟಿ ಮಾಡಿ ದೂರು ಸಲ್ಲಿಸಲು ಈಗಲೂ ಅವಕಾಶವಿದೆ. ಅವರು ಮೊದಲು ದೂರು ಕೊಡಲಿ’ ಎಂದು ರೆಡ್ಡಿ ಹೇಳಿದರು.
ನಲಪಾಡ್‌ನನ್ನು ಬಂಧಿಸಿದಾಗ ಅವರ ಬಳಿ ಅಥವಾ ಮನೆಯಲ್ಲಿ ಶಸ್ತ್ರಾಸ್ತ್ರ ಇರಲಿಲ್ಲ. ಆರೇಳು ರಿವಾಲ್ವರ್‌ಗಳ ಜತೆ ಅವರು ತೆಗೆಸಿಕೊಂಡಿದ್ದಾರೆ ಎನ್ನಲಾದ ಫೋಟೋಗಳು ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ಗಳಲ್ಲಿ ಓಡಾಡುತ್ತಿವೆ. ಅವರ ಬಳಿ ಪರವಾನಗಿ ಇರಲಿಲ್ಲ. ಹಾಗಿದ್ದರೂ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದರೆ ತಪ್ಪು’ ಎಂದೂ ಹೇಳಿದರು. ಈ ಸಂಬಂಧ ತನಿಖೆ ನಡೆಸಲು ಸಿಟಿ ಕಮಿಷನರ್ ಗೆ ಸೂಚಿಸುವುದಾಗಿ ಹೇಳಿದರು. 
SCROLL FOR NEXT