ರಾಜಕೀಯ

ಸಿದ್ದರಾಮಯ್ಯ, ಗುಂಡೂರಾವ್ ಕ್ಷಮೆ ಕೇಳದಿದ್ದರೆ ಬಿಜೆಪಿಯಿಂದ 'ಜೈಲ್ ಭರೋ' ಎಚ್ಚರಿಕೆ

Lingaraj Badiger
ಬೆಂಗಳೂರು: ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರನ್ನು ಉಗ್ರರಿಗೆ ಹೋಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಈ ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಜೈಲ್ ಭರೋ ಚಳುವಳಿ ಆರಂಭಿಸುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ಅವರು ಗುರುವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಸಿಎಂ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರ ಕ್ಷಮೆ ಕೇಳದಿದ್ದರೆ ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ 'ನಾನು ಬಿಜೆಪಿ, ನಾನು ಆರ್ಎಸ್ಎಸ್' ಎಂಬ ಘೋಷಣೆ ಕೂಗುತ್ತ ರಸ್ತೆಗಿಳಿದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರ ನಮ್ಮನ್ನು ಉಗ್ರರು ಎಂದು ಪರಿಗಣಿಸುವುದಾದರೆ ನಮ್ಮನ್ನು ಬಂಧಿಸಲಿ ಎಂದು ಶೋಭಾ ಸವಾಲು ಹಾಕಿದರು.
ಕಾಂಗ್ರೆಸ್ ರಾಜ್ಯದಲ್ಲಿ ಪಿಎಫ್ಐಗೆ ಬೆಂಬಲ ನೀಡುವ ಮೂಲಕ ಉಗ್ರರನ್ನು ಪೋಷಿಸುತ್ತಿದೆ ಎಂದು ಬಿಜೆಪಿ ಸಂಸದೆ ಆರೋಪಿಸಿದ್ದಾರೆ.
ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಎಸ್ಎಸ್ ಹಾಗೂ ಬಜರಂಗದಳ ಕಾರ್ಯಕರ್ತರು ಉಗ್ರರು ಎಂದು ಹೇಳಿದ್ದರು. ಆದರೆ ಅವರ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಂದು ಯೂಟರ್ನ್ ಹೊಡೆದ ಸಿಎಂ, ನಾನು ಉಗ್ರರು ಎಂದಿಲ್ಲ. ಹಿಂದೂತ್ವ ಉಗ್ರವಾದಿಗಳು ಎಂದಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
SCROLL FOR NEXT