ರಾಜಕೀಯ

ನನ್ನ ಕಣ್ಣೀರಿಗೆ ಕಾಂಗ್ರೆಸ್ ಅಥವಾ ಕಾಂಗ್ರೆಸ್ ನಾಯಕರು ಕಾರಣವಲ್ಲ: ಸಿಎಂ ಎಚ್ ಡಿಕೆ

Lingaraj Badiger
ನವದೆಹಲಿ: ನಾನು ಕಾಂಗ್ರೆಸ್ ಬಗ್ಗೆ ಅಥವಾ ಕಾಂಗ್ರೆಸ್ ನಾಯಕರ ಬಗ್ಗೆ ಎಲ್ಲೂ ಮಾತನಾಡಿಲ್ಲ. ಅದೊಂದು ಪಕ್ಷದ ಕಾರ್ಯಕ್ರಮವಾಗಿತ್ತು ಮತ್ತು ಆ ವೇಳೆ ನಾನು ಭಾವನಾತ್ಮಕವಾದೆ ಅಷ್ಟೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.
ಇದಕ್ಕು ಮುನ್ನ ಸಮ್ಮಿಶ್ರ ಸರ್ಕಾರದ ನೋವು ಏನು ಅಂತ ನನಗೆ ಗೊತ್ತು ಎಂದಿದ್ದರು. ಈ ಬಗ್ಗೆ ಇಂದು ದೆಹಲಿಯಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ನನ್ನ ಭಾಷಣದಲ್ಲಿ ನಾನು ಎಲ್ಲೂ ಕಾಂಗ್ರೆಸ್ ನಾಯಕರ ಬಗ್ಗೆಯಾಗಲಿ ಅಥವಾ ಕಾಂಗ್ರೆಸ್ ಬಗ್ಗೆಯಾಗಲಿ ಪ್ರಸ್ತಾಪ ಮಾಡಿಲ್ಲ. ಮಾಧ್ಯಮಗಳು ನನ್ನ ಭಾಷಣವನ್ನು ತಿರುಚಿವೆ ಎಂದು ಆರೋಪಿಸಿದರು.
ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪಕ್ಷದ ನೂತನ ಸಚಿವರು ಮತ್ತು ಶಾಸಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ತೀವ್ರ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟಿದ್ದರು.
ಸಿಎಂ ಕಣ್ಣೀರಿಗೆ ಕಾಂಗ್ರೆಸ್ ಕಾರಣ ಎಂದು ಹಲವು ಬಿಜೆಪಿ ನಾಯಕರು ಆರೋಪಿಸಿದ್ದರು. ಅಲ್ಲದೆ ಸಿಎಂ ಕಣ್ಣೀರು ಕಾಂಗ್ರೆಸ್ ನಾಯಕರಿಗೂ ಸಹ ಇರಿಸುಮುರಿಸು ಉಂಟು ಮಾಡಿತ್ತು.
ಈ ಕುರಿತು ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ನಾನು ಕೊಟ್ಟಿರುವ ಭರವಸೆಗಳನ್ನು ಈಡೇರಿಸಲು ಎದುರಾಗುವ ಸವಾಲುಗಳನ್ನು ನೋಡಿ ನನಗೆ ಕಣ್ಣೀರು ಬಂತು. ಕಾಂಗ್ರೆಸ್ ನಿಂದ ನನಗೆ ತೊಂದರೆಯಾಗುತ್ತಿದೆ ಎಂದು ನಾನು ಎಂದಿಗೂ ಹೇಳಿಲ್ಲ. ನನ್ನ ಹೇಳಿಕೆಗಳನ್ನು ತಿರುಚಲಾಗಿದೆ. ತಪ್ಪಾಗಿ ಅರ್ಥೈಸಲಾಗಿದೆ. ಕಾಂಗ್ರೆಸ್  ನಾಯಕರಿಂದ ನನಗೆ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ ಎಂದು ಹೇಳಿದ್ದಾರೆ.
SCROLL FOR NEXT