ಬೆಂಗಳೂರು: ಜೆಡಿಎಸ್, ಕಾಂಗ್ರೆಸ್ ಸಂಮ್ಮಿಶ್ರ ಸರ್ಕಾರದ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಜುಲೈ 5 ರಂದು ಮೊದಲ ಬಜೆಟ್ ಮಂಡಿಸುತ್ತಿದ್ದು, ಬಹುನಿರೀಕ್ಷಿತ ರೈತರ ಸಾಲ ಮನ್ನಾ ಮಾಡುವ ನಿರೀಕ್ಷೆಯಿದೆ.
ಜುಲೈ 2 ರಂದು ಬಜೆಟ್ ಅಧಿವೇಶನ ಆರಂಭವಾಗಲಿದ್ದು, ರಾಜ್ಯಪಾಲ ವಜೂಭಾಯಿ ವಾಲಾ, ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜುಲೈ 12 ರಂದು ಅಧಿವೇಶನ ಮುಕ್ತಾಯಗೊಳ್ಳಲಿದೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಜೆಟ್ ಅಧಿವೇಶನದ ವೇಳಾಪಟ್ಟಿಗೆ ಅನುಮೋದನೆ ನೀಡಲಾಗಿದೆ ಎಂದು ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಸುದ್ದಿಗಾರರಿಗೆ ತಿಳಿಸಿದರು.
ಆದಾಗ್ಯೂ, ಎಷ್ಟು ಪ್ರಮಾಣದ ರೈತರ ಸಾಲ ಮನ್ನಾ ಮಾಡಲಾಗುತ್ತದೆ ಎಂಬ ಬಗ್ಗೆ ಸಭೆಯಲ್ಲಿ ಯಾವುದೇ ನಿರ್ದಿಷ್ಟ ಅಂಕಿಅಂಶಗಳು ಬಹಿರಂಗಗೊಂಡಿಲ್ಲ. ಸಹಕಾರಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಮಾಡುವ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಕಳೆದ ಎರಡು ವಾರಗಳಿಂದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಣಕಾಸು, ಕೃಷಿ. ಸಹಕಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಸಾಲಮನ್ನಾ ಅನುಷ್ಠಾನಗೊಳಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದಲೂ ಬೆಂಬಲ ಪಡೆದುಕೊಂಡಿದ್ದಾರೆ.
ರಾಜ್ಯದ ಬೊಕ್ಕಸಕ್ಕೆ ಹೊರೆಯಾಗದ ರೀತಿಯಲ್ಲಿ ರೈತರ 53 ಸಾವಿರ ಕೋಟಿ ರೂಪಾಯಿ ಹಣ ಹೊಂದಿಸುವುದು ಕುಮಾರಸ್ವಾಮಿ ಅವರಿಗೆ ಸವಾಲಿನ ಕೆಲಸವಾಗಿದೆ. ಮುಖ್ಯಮಂತ್ರಿಗಳ ಆಪ್ತ ಮೂಲಗಳ ಪ್ರಕಾರ ಮೊದಲ ಬಜೆಟ್ ನಲ್ಲಿ ರೈತರ ಸಹಕಾರಿ ಬ್ಯಾಂಕುಗಳಲ್ಲಿನ 2 ಲಕ್ಷ ರೂಪಾಯಿ ಕೃಷಿ ಸಾಲ ಮನ್ನಾ ಆಗುವ ಸಾಧ್ಯತೆ ಇದೆ.
ಸಹಕಾರಿ ಬ್ಯಾಂಕುಗಳಲ್ಲಿ ಅಂದಾಜು 11, 900 ಕೋಟಿ ರೂಪಾಯಿ ರೈತರ ಸಾಲವಿದ್ದು, ಸಾಲಮನ್ನಾದಿಂದ 22 ಲಕ್ಷ ರೈತರಿಗೆ ಅನುಕೂಲವಾಗಲಿದೆ . ಮೊದಲ ಬಜೆಟ್ ನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಸಾಲಗಳ ಮೇಲಿನ ಬಡ್ಡಿಯನ್ನು ರದ್ದುಪಡಿಸುವುದು , ನಂತರದ ಬಜೆಟ್ ನಲ್ಲಿ ಸಾಲಮನ್ನಾ ಸಿದ್ದಾಂತವನ್ನು ಪರಿಗಣಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಸರ್ಕಾರದ ಹಲವು ಜನಪರ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ಮುಂದುವರೆಸಲಿದ್ದಾರೆ. ಆದಾಗ್ಯೂ, ಸಾಲಮನ್ನಾ ಯೋಜನೆ ಹಿನ್ನೆಲೆಯಲ್ಲಿ ಹಲವು ಭಾಗ್ಯಗಳಿಗೆ ಅನುದಾನ ಕಟ್ ಆಗುವ ಸಾಧ್ಯತೆ ಇದೆ.