ರಾಜಕೀಯ

ನಾಳೆ ಪ್ರಜಾಕೀಯ, ರಾಜಕೀಯದ ನಡುವಿನ ನಿಜವಾದ ಫಲಿತಾಂಶ: ಉಪೇಂದ್ರ

Srinivasamurthy VN
ಬೆಂಗಳೂರು: ಮಂಗಳವಾರದೊಳಗೆ ಪ್ರಜಾಕೀಯ, ರಾಜಕೀಯದ ನಡುವಿನ ನಿಜವಾದ ಫಲಿತಾಂಶ ಪ್ರಕಟವಾಗಲಿದೆ ಎಂದು ಟ್ವೀಟ್ ಮಾಡುವ ಮೂಲಕ ಕೆಪಿಜೆಪಿ ಸಂಸ್ಥಾಪಕ ಸೂಪರ್ ಸ್ಟಾರ್ ಉಪೇಂದ್ರ ಮತ್ತೆ ಸುದ್ದಿಯಾಗಿದ್ದಾರೆ.
ತಮ್ಮ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಸಂಸ್ಥಾಪಕರಾದ ಮಹೇಶ್ ಗೌಡ ಹಾಗೂ ಉಪೇಂದ್ರ ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ನಟ ಉಪೇಂದ್ರ ಪಕ್ಷದಿಂದ ಹೊರಬರುವ ಸಾಧ್ಯತೆ ಇದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ನಟ ಉಪೇಂದ್ರ ಮಂಗಳವಾರದ ಹೊತ್ತಿಗೆ ಪ್ರಜಾಕೀಯ ಮತ್ತು ರಾಜಕೀಯದ ನಡುವಿನ ನಿಜವಾದ ಫಲಿತಾಂಶ ಹೊರ ಬೀಳಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮಾಧ್ಯಮಗಳ ವರದಿಯಂತೆ ಕೆಪಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಸಂಬಂಧ ಹಾಗೂ ವಿವಿಧ ಸ್ಥಾನ ಮತ್ತು ಜವಾಬ್ದಾರಿ ಹಂಚಿಕೆ ಸಂಬಂಧ ಮಹೇಶ್ ಗೌಡ ಹಾಗೂ ಉಪೇಂದ್ರ ಅವರ ನಡುವೆ ವಿರಸ ಮೂಡಿದ್ದು, ಇದೇ ಕಾರಣಕ್ಕೆ ನಟ ಉಪೇಂದ್ರ ಪಕ್ಷದಿಂದ ಹೊರಬರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. 
ವರದಿಗಳ ಅನ್ವಯ ನಟ ಉಪೇಂದ್ರ ದಕ್ಷ, ಪ್ರಾಮಾಣಿಕ, ವಿದ್ಯಾವಂತ ಅಭ್ಯರ್ಥಿಗಳನ್ನು ಕೆಪಿಜೆಪಿ ಪಕ್ಷದ ಅಭ್ಯರ್ಥಿಗಳನ್ನಾಗಿ ಆರಿಸಲು ಮುಂದಾಗಿದ್ದಾರೆ. ಆದರೆ, ಮಹೇಶ್ ಗೌಡ ಟಿಕೆಟ್ ಮಾರುತ್ತಿದ್ದಾರೆಂದು ಎಂದು ಉಪೇಂದ್ರ ಆರೋಪಿಸುತ್ತಿದ್ದು, ಈ ವಿಷಯವಾಗಿ ಈ ಇಬ್ಬರ ನಡುವೆ ಭಿನ್ನಮತ ತಲೆದೋರಿದ್ದು, ಈ ಕಾರಣಕ್ಕಾಗಿ ಪಕ್ಷವನ್ನು ತೊರೆಯಲು ಉಪೇಂದ್ರ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ನಟ ಉಪೇಂದ್ರ, ಪ್ರಜಾಕೀಯ ಮತ್ತು ರಾಜಕೀಯದ ಬಹು ದೊಡ್ಡ ಪರೀಕ್ಷೆ ಇದೇ ತಿಂಗಳು 6 ನೇ ತಾರೀಖು ಬಹಿರಂಗ ಆಗುತ್ತದೆ ದಯವಿಟ್ಟು ಕಾದು ನೋಡಿ ಎಂದು ಹೇಳಿದ್ದಾರೆ.
ಇನ್ನು ಮೂಲಗಳ ಪ್ರಕಾರ ಇಂದು ಕೆಪಿಜೆಪಿ ಸಭೆ ಇದ್ದು, ಇಂದಿನ ಸಭೆಯಲ್ಲಿ ಉಪೇಂದ್ರ ಅವರ ಸಾರಥ್ಯದ ಕುರಿತು ಚರ್ಚಿಸಲಾಗುತ್ತದೆ ಎನ್ನಲಾಗಿದೆ. ಅಂತೆಯೇ ನಾಳೆಯೂ ಪಕ್ಷದ ಸಭೆ ನಡೆಯಲಿದ್ದು, ನಾಳಿನ ಸಭೆಯಲ್ಲಿ ನಟ ಉಪೇಂದ್ರ ಪಾಲ್ಗೊಳ್ಳಲ್ಲಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಚುನಾವಣೆಗೂ ಮುನ್ನ ಮತದಾರರಲ್ಲಿ ಹೊಸ ಆಶಾಭಾವ ಮೂಡಿಸಿದ್ದ ಕೆಪಿಜೆಪಿ ಇದೀಗ ತನ್ನ ಆಂತರಿಕ ಭಿನ್ನಾಭಿಪ್ರಾಯಗಳ ಮೂಲಕ ನಿರಾಶೆ ಮೂಡಿಸುವಂತಾಗಿದೆ.
SCROLL FOR NEXT