ಬೆಂಗಳೂರಿಗಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಬೆಂಗಳೂರಿನ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ರಾಜಧಾನಿಗಾಗಿಯೇ ಪ್ರತ್ಯೇಕ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ.
ನವ ಬೆಂಗಳೂರು ಮತ್ತು 3ಜಿ ಮುಕ್ತ ಬೆಂಗಳೂರು (ಗೂಂಡಾ, ಗುಂಡಿ ಮತ್ತು ಗಾರ್ಬೇಜ್ ಅಥವಾ ಕಸ) ನಗರಕ್ಕಾಗಿ ಪ್ರತ್ಯೇಕ ಪ್ರಣಾಳಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಕೇಂದ್ರ ಸಂಸದೀಯ ವ್ಯವಹಾರ ಸಚಿವ ಅನಂತ್ ಕುಮಾರ್, ಪ್ರಕಾಶ್ ಜಾವಡೇಕರ್ ಅವರು ಬೆಂಗಳೂರಿಗಾಗಿ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿ ಬೆಂಗಳೂರನ್ನು ಆಳುತ್ತಿದೆ. ಗೂಂಡಾಗಿರಿ, ಗುಂಡಿ ಹಾಗೂ ಗಾರ್ಬೇಜ್ ಎಂಬ 'ತ್ರಿಜಿ' ಸಮಸ್ಯೆಯಿಂದ ಬೆಂಗಳೂರು ಬಳಲುತ್ತಿದೆ ಎಂದು ವ್ಯಂಗ್ಯವಾಡಿದರು.
'ಕೆಂಪೇಗೌಡರು ಕಟ್ಟಿದ ಬೆಂಗಳೂರಿಗೆ ವಿಶ್ವೇಶ್ವರಯ್ಯನವರಂಥಹ ಮಹನೀಯರು ಒಂದು ರೂಪ ನೀಡಿದ್ದರು. ಅದೇ ಬೆಂಗಳೂರು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸಿಲಿಕಾನ್ ಸಿಟಿ ದುಸ್ಥಿತಿಗೆ ತಲುಪಿದೆ. ಹೀಗಾಗಿ ನವ ಬೆಂಗಳೂರು ರಚನೆಗಾಗಿ ನಾವು ಪ್ರತ್ಯೇಕ ಪ್ರಣಾಳಿಕೆ ರಚಿಸಿದ್ದೇವೆ. ಬಿಲ್ಡರ್, ಕಾಂಟ್ರ್ಯಾಕ್ಟರ್, ಲ್ಯಾಂಡ್ ಮಾಫಿಯಾಗಳಿಂದ ಬೆಂಗಳೂರನ್ನು ರಕ್ಷಿಸುವುದು ನಮ್ಮ ಉದ್ದೇಶ. ಇದರ ಜತೆಗೆ ಬೆಂಗಳೂರು ರೈಲ್ವೇ ಮೂಲಭೂತ ಸೌಕರ್ಯ ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡುತ್ತೇವೆ. ಇದೇ ರೀತಿ ಬೆಂಗಳೂರನ್ನು ಮತ್ತೆ ಸಂಪದ್ಭ್ಬರಿತ ನಗರವಾಗಿ ಮಾಡಲು ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಇದೇ ವೇಳೆ ಮಾಜಿ ಡಿಸಿಎಂ ಆರ್.ಅಶೋಕ್ ಮಾತನಾಡಿ ''ಬಾಂಗ್ಲಾ ವಲಸಿಗರು ಹಾಗೂ ಡ್ರಗ್ ಮಾಫಿಯಾದಲ್ಲಿ ತೊಡಗಿರುವ ಆಫ್ರಿಕಾ ಪ್ರಜೆಗಳ ನಿಯಂತ್ರಣಕ್ಕೆ ಬಿಜೆಪಿ ಕ್ರಮ ಕೈಗೊಳ್ಳಲಿದೆ. ವಿಧಾನಸೌಧ ಸುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್‌ಗೆ ನಿಷೇಧ ಹೇರುವ ಜತೆಗೆ, ಬೆಂಗಳೂರು ವಿಭಜನೆ ತಡೆಯುತ್ತೇವೆ'ಎಂದು ಹೇಳಿದರು. ಇನ್ನು ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಪ್ರಕಾಶ್ ಜಾವಡೇಕರ್, ಮುರಳೀಧರ್ ರಾವ್ ಉಪಸ್ಥಿತರಿದ್ದರು.
ಬೆಂಗಳೂರು ಅಭಿವೃದ್ಧಿಗೆ 15 ವರ್ಷಗಳ ದೀರ್ಘಾವಧಿ ಸಮಗ್ರ ಅಭಿವೃದ್ಧಿ ಯೋಜನೆ. ಮಹಾನಗರ ಪ್ರಾದೇಶಿಕ ಆಡಳಿತಕ್ಕಾಗಿ ಕಾಯಿದೆ ರೂಪಿಸುವ ಭರವಸೆ. ಭೂ ಗಳ್ಳರ ವಿರುದ್ಧ ಕಠಿಣ ಕ್ರಮ, ಭೂ ಕಬಳಿಕೆ ನಿಯಂತ್ರಣಕ್ಕೆ ವಿಶೇಷ ನ್ಯಾಯಾಲಯ ಸ್ಥಾಪನೆ, ಮಲ ಹೊರುವ ಪದ್ಧತಿ ನಿಷೇಧ, ಫ್ಲೆಕ್ಸ್, ಬ್ಯಾನರ್, ಬಿತ್ತಿ ಪತ್ರಕ್ಕೆ ಕಡಿವಾಣ.
ಮುಖ್ಯಮಂತ್ರಿ ಜಲಧಾರೆ ಯೋಜನೆ ಅನ್ವಯ 24 ಗಂಟೆ ನಗರಕ್ಕೆ ಕುಡಿಯುವ ನೀರು. ಮಂಗಳಮುಖಿಯರ ಕಲ್ಯಾಣ ನೀತಿ. ಕೆಂಪೇಗೌಡ ವಸತಿ ಯೋಜನೆ. ಬೆಂಗಳೂರಿನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಹೆಚ್ಚಳ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ. ಶಾಲೆಗಳು ಹಾಗೂ ಇತರೆ ಸ್ಥಳಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಸಮಗ್ರ ಮಾರ್ಗಸೂಚಿ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬಲಪಡಿಸುವುದು. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ
ಪ್ರಾರ್ಥನಾ ಕೇಂದ್ರಗಳಿಗೆ ಪ್ರಸಾದ ಸೌಕರ್ಯ ಕಲ್ಪಿಸುವ ಪ್ರಸಾದ ಯೋಜನೆ. ಬೆಂಗಳೂರು ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರ ರಚನೆ.
ಆಯುಷ್ಮಾನ್ ಬೆಂಗಳೂರು, ಮೋದಿ ಹೆಲ್ತ್ ಕೇರ್, 24 ಗಂಟೆ ಕಾರ್ಯ ನಿರ್ವಹಿಸುವ ಸ್ಮಾರ್ಟ್ ಕ್ಲಿನಿಕ್, ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಮೌಲ್ಯದ ಆರೋಗ್ಯ ವಿಮೆ. ಪುರಾತನ ಕಟ್ಟಡ ಹಾಗೂ ಹಬ್ಬಗಳ ಬಗ್ಗೆ ವಿವರ ಸಂಗ್ರಹಣೆಗೆ ಬೆಂಗಳೂರು ಪರಂಪರೆ ಕೋಶ
ವಾರ್ಷಿಕ ಮರಗಣತಿ. ಹಸಿರು ಬೆಂಗಳೂರು, ಮನೆಗೊಂದು ಮರ ಯೋಜನೆ.
ಮಹಿಳೆಯರ ರಕ್ಷಣೆಗೆ ರಾಣಿ ಚನ್ನಮ್ಮ ಫ್ಲೈಯಿಂಗ್ ಸ್ಕ್ವಾಡ್. ಬಡ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಪೂರೈಕೆ.
ಅಗ್ಗದ ದರದಲ್ಲಿ ಅಟಲ್ ಸಾರಿಗೆ ವ್ಯವಸ್ಥೆ. ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಉಪನಗರಗಳ ನಿರ್ಮಾಣ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics