ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್
ಬೆಂಗಳೂರು: ಕರ್ನಾಟಕ ರಾಜ್ಯಪಾಲ ವಜುಭಾಯ್ ವಾಲಾ ಅವರು ಬಹುಮತ ಸಾಬೀತು ಪಡಿಸಲು ಮೊದಲು ಬಿಜೆಪಿಗೆ ಆಹ್ವಾನ ನೀಡಿದ್ದೇ ಆದರೆ, ಅದರ ಅರ್ಥ ಕುದುರೆ ವ್ಯಾಪಾರಕ್ಕೆ ಆಹ್ವಾನ ನೀಡಿದಂತೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಮಂಗಳವಾರ ಹೇಳಿದ್ದಾರೆ.
ಇಡೀ ದೇಶದಾದ್ಯಂತ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ರಾಜ್ಯ ವಿಧಾನಸಭಾ ಫಲಿತಾಂಶ ಹೊರ ಬಿದ್ದು ಅತಂತ್ರ ಸ್ಥಿತಿ ಎದುರಾಗಿದೆ.
ಈ ಹಿನ್ನಲೆಯಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಅಗತ್ಯ ಸಂಖ್ಯಾ ಬಲವಿದೆ ಹಾಗೂ ಮೈತ್ರಿ ಸರ್ಕಾರ ಸ್ಥಿರ ಸರ್ಕಾರವನ್ನು ನೀಡಬಲ್ಲದು ಎಂದು ಹೇಳಿದ್ದಾರೆ.
ಗೌರವಾನ್ವಿತ ರಾಜ್ಯಪಾಲರು ಬಿಜೆಪಿಗೆ ಆಹ್ವಾನ ನೀಡಿದ್ದೇ ಆದರೆ, ಅದರರ್ಥ ಕುದುರೆ ವ್ಯಾಪಾರಕ್ಕೆ ಆಹ್ವಾನ ನೀಡಿದಂತಾಗುತ್ತದೆ. ದೇಶದ ಏಕೈಕ ಅತೀ ದೊಡ್ಡ ಪಕ್ಷವೆಂದು ಹೇಳಿಕೊಂಡು ಬಿಜೆಪಿ ಸರ್ಕಾರ ರಚನೆ ಮಾಡಲು ಮುಮಂದಾಗುತ್ತದೆ. ಗೋವಾದಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿದೆ. ಆದರೆ, ಬಿಜೆಪಿ ಸಣ್ಣ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಬಹುಮತವನ್ನು ಸಾಬೀತುಪಡಿಸಿ ಸರ್ಕಾರ ರಚನೆ ಮಾಡಿತ್ತು.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸ್ಥಿರ ಸರ್ಕಾರವನ್ನು ನೀಡಲಿದೆ. ಈಗಾಗಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರತ್ಯೇಕವಾಗಿ ರಾಜ್ಯಪಾಲರಿಗೆ ಪತ್ರಗಳನ್ನು ಸಲ್ಲಿಸಿದೆ. ಕಾಂಗ್ರೆಸ್ ಜೆಡಿಎಸ್"ಗೆ ಬೆಂಬಲ ನೀಡಿದ್ದರೆ, ಜೆಡಿಎಸ್ ಕಾಂಗ್ರೆಸ್'ಗೆ ಬೆಂಬಲ ನೀಡಿದೆ. ಹೀಗಾಗಿ ಸರ್ಕಾರ ರಚನೆಗೆ ರಾಜ್ಯಪಾಲರು ಮೊದಲು ನಮಗೇ ಆಹ್ವಾನ ನೀಡಬೇಕೆಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics