ಈಗಲ್ಟನ್ ರೆಸಾರ್ಟ್ ನಲ್ಲಿ ಕುಮಾರಸ್ವಾಮಿ ಭೇಟಿ ಮಾಡಿದ ಜಮೀರ್
ಬೆಂಗಳೂರು: ಜೆಡಿಎಸ್ ನಿಂದ ಹೊರಬಂದ ನಂತರ ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾರೆ.
ರಾಜ್ಯದಲ್ಲಿ ಚುನಾವಣಾ ಫಲಿತಾಂಶದ ಬಳಿಕ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರಿಂದ ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಬೆಂಬಲ ನೀಡಿದೆ. ಇನ್ನು ರಾಜ್ಯದಲ್ಲಿ ರೆಸಾರ್ಟ್ ರಾಜಕಾರಣ ಮುಂದುವರೆದಿದ್ದು, ಕಾಂಗ್ರೆಸ್ ತನ್ನ ಎಲ್ಲ ಶಾಸಕರನ್ನು ರಾಮನಗರ ಜಿಲ್ಲೆಯ ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಇರಿಸಿದೆ. ಈ ಶಾಸಕರಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಕೂಡ ಇದ್ದಾರೆ. ಜೆಡಿಎಸ್ ಶಾಸಕರೂ ಕೂಡ ಅದೇ ರೆಸಾರ್ಟ್ ನಲ್ಲಿ ಇದ್ದು ಈ ವೇಳೆಯಲ್ಲಿ ಕುಮಾರಸ್ವಾವಿು ಮತ್ತು ಜಮೀರ್ ಅಹ್ಮದ್ ಖಾನ್ ಮುಖಾಮುಖಿ ಆಗಿದ್ದಾರೆ.
ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇನ್ನು ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ಕುಮಾರಸ್ವಾಮಿ ಅವರನ್ನು ರಾಜಕೀಯದಲ್ಲಿ ನಾನು ಅವರನ್ನ ವಿರೋಧ ಮಾಡಿದ್ದೆ, ಅವರು ನನ್ನನ್ನು ವಿರೋಧ ಮಾಡಿದ್ದರು ಅಷ್ಟೇ. ಈಗ ಜೆಡಿಎಸ್ ಜೊತೆಗೆ ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ನಾವು ಅದಕ್ಕೆ ಒಪ್ಪಿಕೊಂಡಿದ್ದೇವೆ ಎಂದು ಹೇಳಿದರು.
ಅಂತೆಯೇ ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ಇದೇ ಪಕ್ಷದಲ್ಲೇ ಇರುತ್ತೇನೆ ಎಂದು ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಚುನಾವಣಾ ಫಲಿತಾಂಶದ ದಿನದಂದು ಗೆಲುವಿನ ಬಳಿಕ ಜಮೀರ್ ಅಹ್ಮದ್, ನಾನು ಇಂದು ಜೆಡಿಎಸ್ ಬಿಟ್ಟು ಬಂದಿದ್ದರ ಬಗ್ಗೆ ಸಮರ್ಥಿಸಿಕೊಳ್ಳುತ್ತೇನೆ. ಕ್ಷೇತ್ರದ ಜನ ನನ್ನನ್ನು ರಾಜಕೀಯ ವ್ಯಕ್ತಿಯಾಗಿ ನೋಡಿಲ್ಲ, ಮನೆಯ ಮಗನಂತೆ ನೋಡಿ ಆಶೀರ್ವದಿಸಿ ಗೆಲ್ಲಿಸಿದ್ದಾರೆ ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos