ಬೆಂಗಳೂರು: ಬಹುಮತ ರಹಿತದ ಹೊರತಾಗಿಯೂ ಸರ್ಕಾರ ರಚನೆ ಮಾಡಿರುವ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎದುರಾಗಿದ್ದು, ವಿಶ್ವಾಸ ಮತ ಗೆಲ್ಲಲು ಬಿಜೆಪಿ ಪ್ರಬಲ ತಂತ್ರ ಹೆಣೆದಿದೆ. ಅಂತೆಯೇ ಅದನ್ನು ಮಣಿಸಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಪ್ರತಿ ತಂತ್ರ ರೂಪಿಸಿದೆ.
ಇನ್ನು ಶತಾಯಗತಾಯ ಸರ್ಕಾರ ಉಳಿಸಿಕೊಳ್ಳಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ಮುಂದೆ ಸಾಕಷ್ಟು ಆಯ್ಕೆಗಳಿದ್ದು, ಈ ಆಯ್ಕೆಗಳು ಇಲ್ಲಿವೆ.
1. ಕಾಂಗ್ರೆಸ್ - ಜೆಡಿಎಸ್‌ನ 15 ಶಾಸಕರಿಗೆ ವಿವಿಧ ಆಮಿಷ ಒಡ್ಡಿ, ಸದನಕ್ಕೆ ಹಾಜರಾಗದಂತೆ ನೋಡಿಕೊಂಡರೆ ಯಡಿಯೂರಪ್ಪ ವಿಶ್ವಾಸ ಮತ ಗೆಲ್ಲಬಹುದು. ಆಗ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗದು. ಲಿಂಗಾಯತ, ರೆಡ್ಡಿ, ನಾಯಕ (ವಾಲ್ಮೀಕಿ) ಸಮುದಾಯಕ್ಕೆ ಸೇರಿರುವ 12ಕ್ಕೂ ಹೆಚ್ಚು ಶಾಸಕರು ಹಾಗೂ ಇಬ್ಬರು ಪಕ್ಷೇತರ ಶಾಸಕರನ್ನು ಸೆಳೆಯುವ ಯತ್ನವನ್ನು ಬಿಜೆಪಿ ಈಗಲೂ ಮುಂದುವರಿಸಿದೆ.
2. 8-10 ಶಾಸಕರು ಯಡಿಯೂರಪ್ಪ ಪರ ಮತ ಹಾಕುವಂತೆ (ಅಡ್ಡಮತದಾನ) ಒಲಿಸಿಕೊಳ್ಳುವುದು. ಹೀಗಾದರೂ ಯಡಿಯೂರಪ್ಪ ಅಧಿಕಾರ ಉಳಿಯಲಿದೆ. ಆದರೆ ಹೀಗೆ ಅಡ್ಡ ಮತದಾನ ಮಾಡಿದ ಶಾಸಕರ ಅನರ್ಹಗೊಳಿಸಲು ಕಾಂಗ್ರೆಸ್-ಜೆಡಿಎಸ್ ಮನವಿ ಸಲ್ಲಿಕೆ ಮಾಡಬಹುದು. ಈ ವಿಚಾರದಲ್ಲೂ ಬಿಜೆಪಿ ಮೇಲುಗೈ ಸಾಧಿಸಬಹುದು. ಏಕೆಂದರೆ ಸ್ಪೀಕರ್ ಬಿಜೆಪಿಯವರೇ ಆಗಿರುವುದರಿಂದ ಅದು ತತ್ ಕ್ಷಣಕ್ಕೆ ಜಾರಿಗೆ ಬರುವುದಿಲ್ಲ. ಆಗ ಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಅದಕ್ಕೆ ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಅಷ್ಟು ಹೊತ್ತಿಗಾಗಲೇ ಬಹುಮತ ಸೃಷ್ಟಿ ಮಾಡಿಕೊಳ್ಳಲು ಬೇಕಾದಷ್ಟು ಸಮಯ ಬಿಜೆಪಿಗೆ ದೊರೆಯುತ್ತದೆ.
3. ಎಲ್ಲ ತಂತ್ರಗಾರಿಕೆ ವಿಫಲವಾಗಿ ಅಧಿಕಾರ ಕಳೆದುಕೊಳ್ಳುವುದು ಖಚಿತ ಎಂದಾದರೆ, ಲಿಂಗಾಯತರಿಗೆ ಅನ್ಯಾಯ ಮಾಡಲಾಯಿತು, ಮೂರನೇ ಬಾರಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವಂತಾಯಿತು ಎಂದು ವಿದಾಯ ಭಾಷಣ ಮಾಡಿ, ಯಡಿಯೂರಪ್ಪ ರಾಜೀನಾಮೆ ನೀಡಬಹುದು.
4. ಮತ ಯಾಚನೆ ವೇಳೆ ಸದನದಲ್ಲಿ ಗದ್ದಲ ಎಬ್ಬಿಸಿ, ಹೆಚ್ಚಿನ ಮತಗಳು ವಿಶ್ವಾಸಮತ ಪರವಾಗಿದೆ, ವಿಶ್ವಾಸ ಮತ ಗೆದ್ದಿದೆ ಎಂದು ತಮ್ಮವರೇ ಆದ ಹಂಗಾಮಿ ಸ್ಪೀಕರ್ ಎಂದು ಘೋಷಿಸಬಹುದು. ಆದರೆ ಹಾಲಿ ವಿಶ್ವಾಸ ಮತ ಸುಪ್ರೀಂ ಕೋರ್ಟ್ ಕಣ್ಗಾವಲಿನಲ್ಲಿ ನಡೆಯುತ್ತಿರುವುದರಿಂದಾಗಿ ಈ ಮಾರ್ಗ ಕಷ್ಟ.
5. ಒಂದು ವೇಳೆ ವಿಶ್ವಾಸ ಮತದಲ್ಲಿ ಗೆದ್ದರೆ ಮತ್ತೆ ಆರು ತಿಂಗಳು ಈ ಪ್ರಕ್ರಿಯೆ ನಡೆಸುವ ಅವಶ್ಯ ಇರುವುದಿಲ್ಲ. ಈ ಅವಧಿಯಲ್ಲಿ ಏನೂ ಬೇಕಾದರೂ ಆಗಬಹುದು. ಬೇಕಿದ್ದರೆ ಬಿಜೆಪಿ ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರನ್ನು ತನ್ನತ್ತ ಸೆಳೆಯಬಹುದು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos