ಬೆಂಗಳೂರು: ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗೆ ಸಿದ್ದತೆಗಳು ಸಾಗಿರುವ ಬೆನ್ನಲ್ಲೇ 30 ತಿಂಗಳುಗಳ ಅಧಿಕಾರ ಹಂಚಿಕೆ ಸೂತ್ರವನ್ನು ಕಾಂಗ್ರೆಸ್ ಮುಂದಿಟ್ಟಿದೆ ಎನ್ನುವ ಮಾತುಗಳು ಕೇಳಿ ಬರತೊಡಗಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ "ಇಂತಹಾ ಯಾವ ಸೂತ್ರಗಳೂ ಇಲ್ಲ, ಇದರ ಸಂಬಂಧ ಯಾವ ಮಾತುಕತೆಗಳು ನಡೆಯುತ್ತಿಲ್ಲ" ಎಂದಿದ್ದಾರೆ.
ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳುವ ಮಾತುಗಳು ಕೇವಲ ವದಂತಿ. ಇಂತಹಾ ಯಾವ ಸೂತ್ರಗಳಿಲ್ಲ. ಅಲ್ಲದೆ ಕಾಂಗ್ರೆಸ್ ಗೆ ಎಷ್ಟು ಸಚಿವ ಸ್ಥಾನ, ಯಾವ ಖಾತೆ ನೀಡಬೇಕೆಂದು ಸಹ ನಿರ್ಧಾರವಾಗಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
2006 ರ ಬಿಜೆಪಿ ಜೊತೆಗಿನ 20:20 ಸರ್ಕಾರದಂತೆ ಈ ಬಾರಿಯೂ ಕುಮಾರಸ್ವಾಮಿಯವರು ಕಾಂಗ್ರೆಸ್ ನೊಡನೆ 30 ತಿಂಗಳುಗಳ ಆಡಳಿತ ಹಂಚಿಕೆ ಸೂತ್ರಕ್ಕೆ ಮುಂದಾಗಿದ್ದಾರೆ ಎಂದು ಮಾದ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು.
"ನಾಳೆ ದೆಹಲಿಗೆ ತೆರಳಿ ಅಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಜತೆ ಮಾತುಕತೆ ನಡೆಸುತ್ತೇನೆ. ಅದಾದ ಬಳಿಕ ರಾಜ್ಯ ಸಚಿವಸಂಪುಟದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎಷ್ಟು ಸಚಿವ ಸ್ಥಾನಗಳನ್ನು ಹಂಚಿಕೊಳ್ಳಬೇಕೆಂದು ನಿರ್ಧಾರವಾಗಲಿದೆ" ಕುಮಾರಸ್ವಾಮಿ ಹೇಳಿದ್ದಾರೆ.
2006 ರಲಿ ಬಿಜೆಪಿ ಜತೆಗಿನ ಮೈತ್ರಿಯ ವೇಳೆ ತಮ್ಮ ನಿಗದಿತ ಅವಧಿಯ 20 ತಿಂಗಳ ಆಡಳಿತದ ಬಳಿಕ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಲು ಕುಮಾರಸ್ವಾಮಿ ಹಿಂಜರಿದಿದ್ದು ಅದು ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ಆ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದೊಡನೆ ಅಧಿಕಾರಕ್ಕೇರಿತ್ತು.