ಬೆಂಗಳೂರು : ಹೆಚ್. ಡಿ. ಕುಮಾರಸ್ವಾಮಿ ನೇತೃತ್ವದ ಸಂಮಿಶ್ರ ಸರ್ಕಾರ ಸಾಲಮನ್ನಾ ಘೋಷಣೆಯನ್ನು 24 ಗಂಟೆಯೊಳಗೆ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್ ಮಾಡಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ವಿಶ್ವಾಸಮತ ಯಾಚನೆ ಪ್ರಸ್ತಾಪ ಕುರಿತು ಮಾತನಾಡಿದ ಬಿ.ಎಸ್. ಯಡಿಯೂರಪ್ಪ , ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿರುವಂತೆ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗುವುದು ಎಂದು ಹೇಳಿದರು.
ಜೆಡಿಎಸ್ ಚುನಾವಣೆಗೂ ಮುನ್ನ ನೀಡಿದ ಪ್ರಣಾಳಿಕೆಯನ್ನು ಸದನದಲ್ಲಿ ಉಲ್ಲೇಖಿಸಿದ ಯಡಿಯೂರಪ್ಪ , ಸಾಲಮನ್ನಾ ಬಗ್ಗೆ ರಾಜ್ಯದ ರೈತರು ವಿಶ್ವಾಸ ಇಟ್ಟುಕೊಂಡಿದ್ದು, ಸಾಲಮನ್ನಾ ಮಾಡುವ ಮೂಲಕ ಅವರ ನಂಬಿಕೆ ಉಳಿಸಿಕೊಳ್ಳಬೇಕಾಗಿದೆ, ಇಲ್ಲದಿದ್ದರೆ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಭಾಷಣದುದ್ದಕ್ಕೂ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ,ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್ ಜೊತೆ ಕಾಂಗ್ರೆಸ್ ಕೈ ಜೋಡಿಸಿದೆ. ಆದರೆ, ಅಪ್ಪ , ಮಕ್ಕಳು ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡದಿದ್ದರೆ ನನ್ನ ಹೆಸರು ಯಡಿಯೂರಪ್ಪ ಅಲ್ಲ ಎಂದು ಸವಾಲು ಹಾಕಿದರು.
'ಕುರುಡನ ಹೆಗಲ ಮೇಲೆ ಹೆಳವ ಕೂತಿದ್ದಾನೆ | ದಾರಿ ಸಾಗುವುದೆಂತೋ ನೋಡಬೇಕು' ಎಂಬ ಗೋಪಾಲ ಕೃಷ್ಣರ ಕವನವನ್ನು ಸದನದಲ್ಲಿ ವಾಚಿಸಿದ ಯಡಿಯೂರಪ್ಪ , ಕುಮಾರಸ್ವಾಮಿ ಅವರಿಗೆ ನಂಬಿದವರನ್ನು ಮುಳುಗಿಸುವ ಬುದ್ದಿಯಿದೆ. ಕುಮಾರಸ್ವಾಮಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಸಹಕಾರ ನೀಡಿದ್ದೆ, ಆದರೆ, ಅವರು ನಂಬಿಕೆಗೆ ದ್ರೋಹ ಬಗೆದರು. ಕಾಂಗ್ರೆಸ್ ಕೂಡಾ ಇದೇ ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.