ಕೋಲಾರ: ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ಒಂದು ವಾರ ಕಳೆದಿದ್ದರೂ ಸಂಪುಟ ವಿಸ್ತರಣೆ ಸಂಬಂಧವಾಗಿ ಮೈತ್ರಿ ಪಕ್ಷಗಳಲ್ಲಿ ಇನ್ನೂ ಒಮ್ಮತ ಮೂಡಿಲ್ಲ.
ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದರಿಂದ ರಾಜ್ಯದ ಜನತೆಗೆ ಹಾಗೂ ತಪ್ಪು ಸಂದೇಶ ರವಾನೆಯಾಗುತ್ತದೆ ಹಾಗೂ ವಿರೋಧ ಪಕ್ಷ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲಿದೆ ಎಂಬುದನ್ನು ಮನಗಂಡಿರುವ ಸಿಎಂ ಕುಮಾರ ಸ್ವಾಮಿ ಕಾಂಗ್ರೆಸ್ ನ ಹಿರಿಯ 7 ಮುಖಂಡರನ್ನು ಸಂಪುಟಕ್ಕೆ ಸೇರಿಸಿಕೊಂಡು ವಿಸ್ತರಣೆ ನಡೆಸಲು ಪ್ರಸ್ತಾಪ ಮುಂದಿಟ್ಟಿದ್ದರು,
ಕಾಂಗ್ರೆಸ್ ನ ಹಿರಿಯ ಮುಖಂಡರಾದ ಗುಲಾಂ ನಬಿ ಆಜಾದ್ ಮತ್ತು ಕೆ,ಸಿ ವೇಣುಗೋಪಾಲ್ ಅವರ ಬಳಿ ಚರ್ಚಿಸಿದ ಕುಮಾರ ಸ್ವಾಮಿ, ಸದ್ಯಕ್ಕೆ 7 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡು ಸಚಿವ ಸಂಪುಟ ವಿಸ್ತರಿಸಿ ರೈತರ ಸಾಲಮನ್ನಾ ವಿಷಯದ ಬಗ್ಗೆ ಸಮಾಲೋಚಿಸಲು ಸಲಹೆ ನೀಡಿದ್ದರು. ಜೊತೆಗೆ ಸಮನ್ವಯ ಸಮಿತಿ ರಚನೆಯಾದ ಮೇಲೆ ಉಳಿದ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವುದಾಗಿ ಹೇಳಿದ್ದರು ಎಂದು ತಿಳಿದು ಬಂದಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರು ಕೇಂದ್ರ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ, ಒಂದೇ ಬಾರಿಗೆ ಸಂಪುಟ ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದಾರೆ, ಒಂದೇ ಬಾರಿ ಸಂಪುಟ ವಿಸ್ತರಣೆ ಮಾಡದಿದ್ದರೇ ಪಕ್ಷದಲ್ಲಿ ಗುಂಪುಗಾರಿಕೆ ಆರಂಭವಾಗುತ್ತದೆ. ಇದರಿಂದ ಪಕ್ಷಕ್ಕೆ ತೊಂದರೆಯಾಗಲಿದೆ ಎಂಬುದಾಗಿ ತಿಳಿಸಿದ್ದಾರೆ, ಸಿದ್ದರಾಮಯ್ಯ ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ಕಾಂಗ್ರೆಸ್ ನಾಯಕರು ಮತ್ತೊಂದು ಸುತ್ತು ಸಿಎಂ ಜೊತೆ ಚರ್ಚಿಸಿ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.