ಮಂಡ್ಯ: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವೇ ಹೊರತು ಕುಮಾರಸ್ವಾಮಿ ಹಾಗೂ ಜೆಡಿಎಸ್ ಗೆ ಕಾಂಗ್ರೆಸ್ ಅನಿವಾರ್ಯವಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ನಟ ಅಂಬರೀಷ್ ಸಿಎಂ ಕುಮಾರಸ್ವಾಮಿ ಪರ ಮಾತನಾಡಿದ್ದಾರೆ.
ಕುಮಾರಸ್ವಾಮಿಗೆ ಕಾಂಗ್ರೆಸ್ ಅಲ್ಲ, ಕಾಂಗ್ರೆಸ್ಸಿಗೆ ಕುಮಾರಸ್ವಾಮಿ ಬೇಕು. ಚುನಾವಣೆಯಿಂದ ದೂರ ಇದ್ದರೂ, ನಾನು ರಾಜಕೀಯದಲ್ಲಿ ಇದ್ದೇ ಇರುತ್ತೇನೆ ಎಂದು ಕುಮಾರಸ್ವಾಮಿ ನೇತೃತ್ವದ ಸರ್ಕಾರ ರೈತರ ಪರ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಕಾಂಗ್ರೆಸ್ಸಿನವರು ಕುಮಾರಸ್ವಾಮಿಗೆ ಆಡಳಿತ ನಡೆಸಲು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದರು. ಜೆಡಿಎಸ್ ಜೊತೆ ವಿಮುಖ ನೀತಿ, ಧೋರಣೆ ತಳೆದರೆ ಸಮ್ಮಿಶ್ರ ಸರ್ಕಾರ ಮುರಿದು ಬೀಳಬಹುದು ಎಂದು ಕೂಡ ಹೇಳಿದ್ದಾರೆ.
ಕಳೆದ ಮೂರು ದಿನಗಳ ಮಂಡ್ಯ ಗುತ್ತಲು ರಸ್ತೆ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟ ಅಭಿಮಾನಿ ಮನೆಗೆ ನಿನ್ನೆ ಭೇಟಿ ನೀಡಿದ್ದ ಅಂಬರೀಶ್ ಮೃತ ಅಭಿಮಾನಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂಡ್ಯ ಕಾಂಗ್ರೆಸ್ ನಲ್ಲಿ ಪ್ರಬಲ ನಾಯಕರಿಲ್ಲವೇ ಎಂದು ಕೇಳಿದ್ದಕ್ಕೆ ಇಲ್ಲಿ ಹಲವು ಯುವ ನಾಯಕರಿದ್ದು ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬಹುದು. ಯುವ ಸಮೂಹಕ್ಕೆ ಮತ್ತು ಹೊಸ ಮುಖಗಳಿಗೆ ಅವಕಾಶ ಸಿಗಬೇಕು. ರಮ್ಯ ಅವರು ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ವಿರೋಧಪಕ್ಷ ನಾಯಕರ ಕಾಲೆಳೆಯುವುದು, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವುದು ಅವರ ಕೆಲಸ. ರಮ್ಯಾರನ್ನು ಟೀಕಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದಾರೆ.