ಉಪಚುನಾವಣೆ: ಸಿದ್ದರಾಮಯ್ಯ ಮಂಡ್ಯ ಭೇಟಿ, ಒಗ್ಗಟ್ಟಿನಿಂದಿರುವಂತೆ ಕಾಂಗ್ರೆಸ್, ಜೆಡಿಎಸ್ ನಾಯಕರ ಮೇಲೆ ಒತ್ತಡ
ಉಪಚುನಾವಣೆ ಕಾವು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಹಗೆ ಸಾಧಿಸುತ್ತಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಒಗ್ಗಟ್ಟಿನಿಂದಿರುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ...
ಮೈಸೂರು: ಉಪಚುನಾವಣೆ ಕಾವು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಹಗೆ ಸಾಧಿಸುತ್ತಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಒಗ್ಗಟ್ಟಿನಿಂದಿರುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರಸ್ತುತ ಸಿದ್ದರಾಮಯ್ಯ ಅವರು ಬಳ್ಳಾರಿ ಪ್ರವಾಸ ಕೈಗೊಂಡಿದ್ದು, ಈ ನಡುವಲ್ಲೇ ಮಾಜಿ ಸಚಿವ ಎನ್ ಚೆಲುವನಾರಾಯಣಸ್ವಾಮಿ ಹಾಗೂ ಪಿಎಂ ನರೇಂದ್ರ ಸ್ವಾಮಿ, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿ ಹಲವು ನಾಯಕರೊಂದಿಗೆ ಮಾತುಕತೆ ನಡೆಸಿ ಜೆಡಿಎಸ್ ಜೊತೆಗೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆಂದು ವರದಿಗಳಿ ತಿಳಿಸಿವೆ.
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಹಗೆ ಸಾಧಿಸುತ್ತಿದ್ದು, ವೇದಿಕೆ ಹಂಚಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಪಕ್ಷದ ನಾಯಕರಿಗೆ ಇದು ಇರಿಸುಮುರಿಸು ಮೂಡಿಸಿದೆ. ಮೈತ್ರಿ ಸರ್ಕಾರವನ್ನು ಮುಂದುವರೆಸಿದ್ದೇ ಆದರೆ, ಹಳೇ ಮೈಸೂರಿನಲ್ಲಿ ಪ್ರಸ್ತುತ ಪಡೆದುಕೊಂಡಿರುವ ಸ್ಥಾನಗಳನ್ನೂ ಕಳೆದುಕೊಳ್ಳುತ್ತೇವೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಅತ್ಯಂತ ಕಠಿಣ ಸಂದರ್ಭದಲ್ಲಿಯೂ ನಾವು ಸಿದ್ದರಾಮಯ್ಯ ಅವರ ಪರ ಹಲವು ಬಾರಿ ನಿಂತಿದ್ದೆವು. ಅಹಿಂದ ರ್ಯಾಲಿಯಲ್ಲಿಯೂ ಪಾಲ್ಗೊಂಡಿದ್ದೇವೆ. ದೇವೇಗೌಡ ಹಾಗೂ ಕುಮಾರಸ್ವಾಮಿಯವರೊಂದಿಗೆ ಹೋಗುವ ಮೂಲಕ ಸಿದ್ದರಾಮಯ್ಯ ಅವರು ತಮ್ಮ ಜನಪ್ರಿಯತೆಯನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರು ಮಂಡ್ಯ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಕೆಲ ನಾಯಕರು ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲು ಬರುತ್ತೇವೆಂದು ಹೇಳುತ್ತಿದ್ದರೂ, ಜೆಡಿಎಸ್ ಜೊತೆಗಿನ ಸಭೆಗೆ ಗೈರು ಹಾಜರಾಗುವುದಾಗಿ ಹೇಳುತ್ತಿದ್ದಾರೆ.