ಮಂಗಳೂರು: ಕಾಂಗ್ರೆಸ್ ಪಕ್ಷ ರೆಬೆಲ್ ನಾಯಕ ಜನಾರ್ಧನ ಪೂಜಾರಿ ಮತ್ತೆ ತಮ್ಮದ ಪಕ್ಷದ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತ್ ಬಂದ್ ಗೆ ಕರೆ ನೀಡಿದವರು ದೇಶ ವಿರೋಧಿಗಳು ಎನ್ನುವ ಮೂಲಕ ಪಕ್ಷದ ನಿರ್ಧಾರವನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ.
ತೈಲೋತ್ಪನ್ನಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್ ಹಿನ್ನಲೆಯಲ್ಲಿ ದೇಶಾದ್ಯಂತ ಜನ ಜೀವನ ಅಸ್ತವ್ಯಸ್ಥಗೊಂಡಿದ್ದು, ಸರ್ಕಾರಿ ವಾಹನಗಳಿಲ್ಲದೆ ಜನ ಪರದಾಡುವಂತಾಗಿದೆ. ಇದರ ನಡುವೆಯೇ ಇದೀಗ ಕಾಂಗ್ರೆಸ್ ಪಕ್ಷದ ನಿರ್ಧಾರಕ್ಕೆ ತಮ್ಮ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ರೆಬೆಲ್ ನಾಯಕ ಎಂದೇ ಗುರುತಿಸಿಕೊಂಡಿರುವ ಜನಾರ್ಧನ ಪೂಜಾರಿ ಭಾರತ್ ಬಂದ್ ಗೆ ಕರೆ ನೀಡಿರುವ ಕಾಂಗ್ರೆಸ್ ಪಕ್ಷದ ನಿರ್ಣಯವನ್ನು ಕಟುವಾಗಿ ಟೀಕಿಸಿದ್ದಾರೆ. 'ಬಂದ್ ಗೆ ಕರೆ ಕೊಟ್ಟವರು ದೇಶ ವಿರೋಧಿಗಳು. ಬಂದ್ ನಿಂದ ಆಗುವ ನಷ್ಟಕ್ಕೆ ಕರೆ ಕೊಟ್ಟವರೇ ಜವಾಬ್ದಾರರಾಗಿರುತ್ತಾರೆ ಎಂದು ತಮ್ಮದೇ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತೈಲೋತ್ಪನ್ನಗಳ ದರ ಏರಿಕೆ ಮತ್ತು ಭಾರತ್ ಬಂದ್ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ನಿನ್ನೆ ಕುದ್ರೋಳಿ ದೇವಾಲಯಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಪೂಜಾರಿ ಅವರು, 'ಬಂದ್ ಗೆ ಕರೆ ಕೊಟ್ಟವರು ಜಾಗೃತೆಯಾಗಿರಬೇಕು. ಕೇಂದ್ರ ಸರ್ಕಾರ ಈಗಾಗಲೇ ದರ ಏರಿಕೆ ಬಗ್ಗೆ ಸ್ಪಷ್ಟನೆ ನೀಡಿದೆ. ಆದರೂ ಬಂದ್ ಗೆ ಕರೆ ನೀಡಲಾಗಿದೆ. ಬಂದ್ ನಿಂದಾಗಿ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಸ್ವತಃ ಸುಪ್ರೀಂ ಕೋರ್ಟ್ ಹೇಳಿದ್ದು, ಅದು ದೇಶ ವಿರೋಧಿ ನಡೆಯಾಗಿದೆ. ಬಂದ್ ಗೆ ಕರೆ ನೀಡೋದು ಭಾರೀ ಸುಲಭ. ಬಂದ್ ನಿಂದ ಆಗುವ ನಷ್ಟಕ್ಕೆ ಕರೆ ಕೊಟ್ಟವರೇ ಜವಾಬ್ದಾರರಾಗ್ತಾರೆ. ಬಂದ್ ಗೆ ಕರೆನೀಡಿದರೆ ಅದು ಕಾನೂನು ವಿರೋಧಿ ನಿಲುವಾಗುತ್ತದೆ. ದೇಶ ಮತ್ತು ರಾಜ್ಯ ಸರ್ಕಾರ ಸೆಸ್ ಕಮ್ಮಿ ಮಾಡಿದರೆ, ಅದರ ಲಾಭ ಜನರಿಗೆ ಸಿಗುತ್ತದೆ ಅನ್ನೋದು ತಪ್ಪು. ಹಿಂದೆ ನಾನೂ ಕೂಡ ಹಣಕಾಸು ಸಚಿವನಾಗಿದ್ದವನು, ಸೆಸ್ ಕಮ್ಮಿ ಮಾಡಿದರೆ ಸರ್ಕಾರ ನಡೆಯುವುದು ಹೇಗೆ. ಕಾಂಗ್ರೆಸ್ ಪಕ್ಷ ತಪ್ಪು ಮಾಡುತ್ತಿದೆ. ಹೀಗೆ ಮಾಡಿದರೆ ಒಂದು ದಿನವೂ ಕಾಂಗ್ರೆಸ್ ಗೆ ಸರ್ಕಾರ ಮಾಡೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಬಂದ್ ಗೆ ಬೆಂಬಲ ನೀಡಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧವೂ ಪೂಜಾರಿ ಕಿಡಿ ಕಾರಿದರು.
ಪ್ರಧಾನಿ ನರೇಂದ್ರ ಮೋದಿಗೆ ಧೈರ್ಯವಿದೆ, ಅವರು ಆ ಕೆಲಸ ಮಾಡುತ್ತಾರೆಯೇ ಎಂಬುದು ಪ್ರಶ್ನೆ!
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಂತಿರುವ ಪೂಜಾರಿ, 'ಪೆಟ್ರೋಲ್ ಅಕ್ರಮ ದಾಸ್ತಾನು ಮಾಡುವವರನ್ನು ಜೈಲಿಗೆ ಹಾಕಬೇಕು. ಅಕ್ರಮ ತಡೆಗಟ್ಟಿದರೆ ಬೆಲೆ ಏರಿಕೆ ಕಡಿಮೆಯಾಗುತ್ತದೆ. ಆದರೆ ಆ ಧೈರ್ಯ ಯಾರಿಗೂ ಇಲ್ಲ. ಆ ಧೈರ್ಯ ಪ್ರಧಾನಿ ಮೋದಿಗೆ ಮಾತ್ರ ಇರೋದು ಎಂದರು. ಆದರೆ ಅವರು ಆ ಕೆಲಸ ಮಾಡುತ್ತಾರೆಯೇ ಎಂಬುದು ಪ್ರಶ್ನೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಜನಾರ್ಧನ ಪೂಜಾರಿ, ಚುನಾವಣೆಗೆ ಸ್ಪರ್ಧೆ ಮಾಡಬಹುದು ಅಥವಾ ಸ್ಪರ್ಧೆ ಮಾಡದೇ ಇರಬಹುದು. ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos