ರಾಜಕೀಯ

ಬರಗೆಟ್ಟ ಕಾಂಗ್ರೆಸ್ ನವರು ಚುನಾವಣೆಗೂ ಮುನ್ನವೇ ಶಸ್ತ್ರ ತ್ಯಜಿಸಿದ್ದಾರೆ: ಅಶೋಕ್ ವ್ಯಂಗ್ಯ

Shilpa D

ಬೆಂಗಳೂರು: ಕಾಂಗ್ರೆಸ್ ನವರು ಬರಗೆಟ್ಟು ಬಿಟ್ಟಿದ್ದಾರೆ,ಚುನಾವಣೆಗೂ ಮುನ್ನವೇ ಶಸ್ತ್ರತ್ಯಾಗ ಮಾಡಿದ್ದಾರೆ ಎಂದು ಕಂದಾಯ ಸಚಿವ ಆರ್ .ಅಶೋಕ್ ವ್ಯಂಗ್ಯವಾಡಿದ್ದಾರೆ.

ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‌, ಜೆಡಿಎಸ್‌ಗೆ ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದ್ದಿದ್ದರೆ, ಜನತೆ ಮೇಲೆ ನಂಬಿಕೆ ಇದ್ದಿದ್ದರೆ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಬಹುದಿತ್ತು. ಆದರೆ ನಾಮಪತ್ರವನ್ನೇ ಸಲ್ಲಿಸದೆ ಯುದ್ದಕ್ಕೂ ಮೊದಲೇ ಶಸ್ತ್ರ ತ್ಯಾಗ ಮಾಡಿವೆ. ಕಾಂಗ್ರೆಸ್‌ನವರು ಮೈತ್ರಿ ಬಯಸುತ್ತಿದ್ದರೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸಹವಾಸವೇ ಬೇಡ ಎನ್ನುತ್ತಿದ್ದಾರೆ.

ಕಾಂಗ್ರೆಸ್ ನವರು ಆಜಾ ಆಜಾ ಅಂತಿದ್ದಾರೆ ದೇವೇಗೌಡರು ಕಭಿ ನಹಿಂ ಕಭಿ ನಹಿಂ ಎನ್ನುತ್ತಿದ್ದಾರೆ. ಉಪ ಚುನಾವಣೆ ನಂತರ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಹೇಳಿಕೆಯನ್ನುಅಶೋಕ್ ಟೀಕಿಸಿದ್ದಾರೆ.

ಕಾಂಗ್ರೆಸ್ಸಿಗರು ಭಿಕ್ಷುಕರ ರೀತಿ ವರ್ತಿಸುತ್ತಿದ್ದಾರೆ, ಸಿದ್ದರಾಮಯ್ಯ ಉಪ ಚುನಾವಣೆಯಲ್ಲಿ ಎಲ್ಲಾ ಸ್ಥಾನದಲ್ಲಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಹಾಗಾದರೆ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಹಾಕಬೇಕಿತ್ತು ಜೆಡಿಎಸ್, ಕಾಂಗ್ರೆಸ್ ಸೇರಿ ಹಾಕಿದ್ದರೆ ಗೆಲ್ಲುತ್ತಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

SCROLL FOR NEXT