ಬೆಂಗಳೂರು: ವಿಧಾನಸಭೆಯಲ್ಲಿ ತಮ್ಮ ಪರಿಸ್ಥಿತಿ ರೇಪ್ ಗೆ ಒಳಗಾದ ಮಹಿಳೆಯಂತಾಗಿದೆ ಎಂದು ಹೇಳಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು ಅವರು ಬುಧವಾರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದು, ರೇಪ್ ಪದವನ್ನು ಕಡತದಿಂದ ತೆಗೆಯುವಂತೆ ಸೂಚಿಸಿದ್ದಾರೆ.
ನನ್ನ ಹೇಳಿಕೆಯಿಂದ ಯಾರಿಗಾದರೂ ವಿಶೇಷವಾಗಿ ಮಹಿಳೆಯರಿಗೆ ನೋವಾಗಿದ್ದರೆ, ಅಥವಾ ಅವಮಾನವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಮಹಿಳೆಯರ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶ ನನಗೆ ಇಲ್ಲ ಎಂದು ಸ್ಪೀಕರ್ ಹೇಳಿದರು.
ಶಾಸಕಿಯರಾದ ಅನಿತಾ ಕುಮಾರಸ್ವಾಮಿ, ಅಂಜಲಿ ನಿಂಬಾಳ್ಕರ್ ರೂಪಕಲಾ ಶಶಿಧರ್, ಲಕ್ಷ್ಮಿ ಹೆಬ್ಬಾಳ್ಕರ್, ಫಾತಿಮಾ, ಸೌಮ್ಯ ರೆಡ್ಡಿ ಹಾಗೂ ವಿನಿಶಾ ಅವರು ನನ್ನನ್ನು ಭೇಟಿ ಮಾಡಿ ರೇಪ್ ಸಂತ್ರಸ್ಥೆ ಹೇಳಿಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಸ್ಪೀಕರ್ ಸದನಕ್ಕೆ ತಿಳಿಸಿದರು.
ನಿನ್ನೆ ಸದನದಲ್ಲಿ ಆಪರೇಷನ್ ಕಮಲ ಆಡಿಯೋ ಟೇಪ್ ಗೆ ಸಂಬಂಧಿಸಿದಂತೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದ ವೇಳೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರು ಪದೇ ಪದೆ ತಮ್ಮ ಹೆಸರು ಪ್ರಸ್ತಾಪ ಮಾಡುತ್ತಿರುವುದನ್ನು ನೋಡಿ, ತಮ್ಮ ಪರಿಸ್ಥಿತಿ ರೇಪ್ ಸಂತ್ರಸ್ಥೆಯಂತಾಗಿದೆ ಎಂದು ಸ್ಪೀಕರ್ ಚಟಾಕಿ ಹಾರಿಸಿದ್ದರು.
ಸ್ಪೀಕರ್ ರೇಪ್ ಪದ ಬಳಕೆಗೆ ಶಾಸಕಿಯರಿಂದ ಹಾಗೂ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸ್ಪೀಕರ್ ಸದನದಲ್ಲಿ ಕ್ಷಮೆ ಯಾಚಿಸಿದ್ದಾರೆ.
ಸದನದಲ್ಲಿ ಬಿಜೆಪಿ ಸದಸ್ಯರ ಧರಣಿ ಮುಂದುವರಿದ ಹಿನ್ನೆಲೆಯಲ್ಲಿ ಸ್ಪೀಕರ್ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.