ಬೆಂಗಳೂರು: ಅತೃಪ್ತ ಶಾಸಕರು ಬೆಂಗಳೂರಿಗೆ ವಾಪಸ್ಸಾಗಿ ಆಪರೇಶನ್ ಕಮಲ ವಿಫಲವಾದರೂ ಕೂಡ ಶುಕ್ರವಾರ ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗ ಸಭೆ ಪಕ್ಷಕ್ಕೆ ನಿಜಕ್ಕೂ ಅಗ್ನಿಪರೀಕ್ಷೆಯಾಗಿದೆ. ಕಳೆದ ಕೆಲದಿನಗಳಿಂದ ಅಸ್ತವ್ಯಸ್ತವಾಗಿದ್ದ ಪಕ್ಷದ ಸ್ಥಿತಿಗತಿಯನ್ನು ವಾಪಸ್ಸು ಮೊದಲಿನಂತೆ ಮಾಡುವ ಸವಾಲು ಪಕ್ಷದ ನಾಯಕರದ್ದಾಗಿದೆ.
ಸಂಪುಟಕ್ಕೆ ಸೇರ್ಪಡೆ ಮಾಡಲಿಲ್ಲ ಎಂಬ ಅಸಮಾಧಾನದಿಂದ ಪಕ್ಷ ತೊರೆಯಲು ಯೋಚನೆ ಮಾಡಿದ್ದ ಕೆಲವು ಶಾಸಕರನ್ನು ಮತ್ತೆ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯನವರು ಇಂದಿನ ಸಭೆಯಲ್ಲಿ ಮಾಡಬೇಕಿದೆ. ಇಂದಿನ ಸಭೆಗೆ ಎಲ್ಲಾ ಶಾಸಕರು ಹಾಜರಾಗುತ್ತಾರೆಯೇ, ಇಲ್ಲವೇ ಎಂಬ ಕುತೂಹಲವಿದೆ.
ಸಭೆಗೆ ಗೈರಾದ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯನವರು ಎಚ್ಚರಿಕೆ ನೀಡಿದ ನಂತರ ಹಲವು ಅತೃಪ್ತ ಶಾಸಕರು ನಿನ್ನೆ ಮತ್ತೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ನನ್ನ ಕಡೆಯಿಂದ ಯಾವುದೇ ಅಸಮಾಧಾನವಿಲ್ಲ, ನಾನು ಬಿಜೆಪಿ ಸೇರುವುದಿಲ್ಲ ಎಂದು ಬಳ್ಳಾರಿ ಶಾಸಕ ಬಿ ನಾಗೇಂದ್ರ ಹೇಳಿದ್ದಾರೆ. ಮುಂಬೈಗೆ ತಾನು ವೈಯಕ್ತಿಕ ಕೆಲಸಕ್ಕೆಂದು ಹೋಗಿದ್ದೆ ಎನ್ನುತ್ತಾರೆ. ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್ ಯಾದವ್ ಸಹ ಬೆಂಗಳೂರಿಗೆ ಬಂದಿದ್ದು ಇಂದಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನನಗೆ ಸ್ವಲ್ಪ ಬೇಸರವಾಗಿದ್ದು ನಿಜ, ಆದರೆ ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ ಎಂದು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಅತೃಪ್ತ ಶಾಸಕರು ಬೆಂಗಳೂರಿಗೆ ಮರಳಿದ್ದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಮೊದಲ ಗೆಲುವು ಎಂದು ಹೇಳಬಹುದು. ಆದರೆ ಸಿದ್ದರಾಮಯ್ಯನವರ ಎಚ್ಚರಿಕೆಗೆ ರಮೇಶ್ ಜಾರಕಿಹೊಳಿಯಂತವರು ಮಣಿದು ಇಂದಿನ ಸಭೆಯಲ್ಲಿ ಭಾಗವಹಿಸುತ್ತಾರೆಯೇ ಅನ್ನುವುದು ಕುತೂಹಲ. ಈ ಮಧ್ಯೆ ಗುರುಗ್ರಾಮದ ಹೊಟೇಲ್ ನಲ್ಲಿರುವ ಬಿಜೆಪಿ ಶಾಸಕರು ಕೂಡ ರಾಜ್ಯಕ್ಕೆ ವಾಪಸ್ಸಾಗುತ್ತಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳ ರಾಜಕೀಯ ಡ್ರಾಮಾಕ್ಕೆ ತೆರೆ ಬೀಳುವ ಸಾಧ್ಯತೆಯಿದ್ದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಹೇಳಿದರೂ ಕೂಡ ಬಿಜೆಪಿ ನಾಯಕರು ಪದೇ ಪದೇ ಆಪರೇಶನ್ ಕಮಲಕ್ಕೆ ಯತ್ನ ಮಾಡುತ್ತಾರೆ ಎಂಬ ವಿಷಯವನ್ನು ತಳ್ಳಿಹಾಕುವಂತಿಲ್ಲ.