ರಾಜಕೀಯ

ಸಿದ್ದರಾಮಯ್ಯ, ಪರಮೇಶ್ವರ್ ನಡುವೆ ತೀವ್ರ ಮಾತಿನ ಜಟಾಪಟಿ

Nagaraja AB
ಬೆಂಗಳೂರು: ಅತೃಪ್ತ ಶಾಸಕರು ರಾಜೀನಾಮೆ ನೀಡಲು ಕಾರಣವಾದ ವಿಷಯಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಡುವೆ ತೀವ್ರ ಮಾತಿನ ಜಟಾಪಟಿ ನಡೆದಿದೆ.
 ಪಕ್ಷದ ಉಸ್ತುವಾರಿ ವೇಣುಗೋಪಾಲ್   ಅವರ ನೇತೃತ್ವದಲ್ಲಿ ನಿನ್ನೆ ರಾತ್ರಿ ನಡೆದ ಸಭೆಯಲ್ಲಿ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ನಡುವೆ ತೀವ್ರ ವಾಗ್ಯುದ್ದವೇ ನಡೆದಿರುವ ಬಗ್ಗೆ ತಿಳಿದುಬಂದಿದೆ. ರಾಜೀನಾಮೆ ನೀಡುವುದಕ್ಕೂ ಮೊದಲು ಬೈರತಿ ಬಸವರಾಜು ಅವರು ನಿಮ್ಮ ಮನೆಗೆ ಬಂದಿದ್ದರಲ್ಲವೇ ? ಇದಕ್ಕೆಲ್ಲಾ ನಿಮ್ಮ ಬೆಂಬಲಿಗರೆ ಕಾರಣ ಎಂದು ಆರೋಪಿಸಿದ್ದಾರೆ.
ಇದರಿಂದ ಕೆರಳಿದ ಸಿದ್ದರಾಮಯ್ಯ, ನಿಮ್ಮ ಕಾರ್ಯ ವೈಖರಿಗೆ ಶಾಸಕರು ಅಸಮಾಧಾನಗೊಂಡಿದ್ದಾರೆ. ಪಕ್ಷದ ಶಾಸಕರನ್ನು ನೀವು ಸರಿಯಾಗಿ ನಡೆಸಿಕೊಳ್ಳುತ್ತಿದ್ದರೆ ಯಾರೂ ರಾಜೀನಾಮೆ ನೀಡಲು ಮುಂದಾಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ಎಂಬುದು ಗೊತ್ತಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಮೊದಲಿನಿಂದಲೂ ಸಿದ್ದರಾಮಯ್ಯ, ಪರಮೇಶ್ವರ್ ಬಣಗಳಿದ್ದು, ಅನೇಕ ವಿಚಾರಗಳಲ್ಲಿ ಎರಡು ಗುಂಪಿನ ನಡುವೆ ಕಿತ್ತಾಟ ನಡೆದುಕೊಂಡೆ ಬಂದಿದೆ. ಈಗ  ರಾಜೀನಾಮೆ ನೀಡಿರುವ ಶಾಸಕರ ಪೈಕಿ ಸಿದ್ದರಾಮಯ್ಯ ಆಪ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.
 ಇದು ಪರಮೇಶ್ವರ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಒಟ್ಟಾರೇ ಶಾಸಕರ ಮನವೊಲಿಸುವಲ್ಲಿ ಇಬ್ಬರು ವಿಫಲವಾಗಿದ್ದು, ಮುಂದಿನ ರಾಜ್ಯ ರಾಜಕೀಯದ ಬೆಳವಣಿಗೆಗಳು ತೀವ್ರ ಕುತೂಹಲ ಮೂಡಿಸಿವೆ.
SCROLL FOR NEXT