ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರಕ್ಕೆ ತಲೆನೋವಾಗಿರುವ ಅತೃಪ್ತ ಶಾಸಕರ ವಿರುದ್ಧ ಕಾಂಗ್ರೆಸ್ ತನ್ನ ಅಂತಿಮ ಗದಾ ಪ್ರಹಾರ ಮಾಡಲು ಮುಂದಾಗಿದ್ದು, ರಾಮಲಿಂಗಾ ರೆಡ್ಡಿ ಅವರನ್ನು ಹೊರತು ಪಡಿಸಿ ಉಳಿದೆಲ್ಲಾ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಕೈ ನಾಯಕರು ದಾಖಲೆ ಸಹಿತ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಬುಧವಾರದ ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾದ ಬೆನ್ನಲ್ಲೇ ಮೈತ್ರಿ ಕೂಟದ ನಾಯಕರು ದಿಢೀರ್ ರಂಗಪ್ರವೇಶ ಮಾಡಿ, ಹಲವು ಸುತ್ತಿನ ಕಾರ್ಯಾಚರಣೆ ನಡೆಸಿದರು. ಈ ವೇಳೆ ಸಭಾಧ್ಯಕ್ಷರನ್ನು ಭೇಟಿ ಮಾಡಿ, ರಾಮಲಿಂಗಾರೆಡ್ಡಿ ಅವರನ್ನು ಹೊರತುಪಡಿಸಿ ತಮ್ಮ ಪಕ್ಷದ 12 ಶಾಸಕರು ಹಾಗೂ ಪಕ್ಷೇತರ ಶಾಸಕ ಆರ್. ಶಂಕರ್ ಅವರನ್ನು ಅನರ್ಹಗೊಳಿಸಬೇಕು ಎಂದು ದಾಖಲೆ ಸಮೇತ ಮನವಿ ಸಲ್ಲಿಸಿದರು. ಅಲ್ಲದೇ, ವಿಶ್ವಾಸ ಮತದ ಮೇಲಿನ ಚರ್ಚೆಗೆ ಸಮಯಾವಕಾಶವನ್ನೂ ಕೇಳಿದರು ಎನ್ನಲಾಗಿದೆ.
ಸರ್ಕಾರದ ವಿಶ್ವಾಸ ಇಮ್ಮಡಿಗೊಳಿಸಿದ ರಾಮಲಿಂಗಾ ರೆಡ್ಡಿ ಯೂಟರ್ನ್
ಏತನ್ಮಧ್ಯೆ, ಬಿಟಿಎಂ ಲೇಔಟ್ ನ ಶಾಸಕ ರಾಮಲಿಂಗಾರೆಡ್ಡಿ ತಮ್ಮ ನಿಲುವು ಬದಲಿಸಿರುವುದು ಮೈತ್ರಿಕೂಟದ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ರಾಜೀನಾಮೆ ವಾಪಸ್ ಪಡೆದು, ವಿಶ್ವಾಸ ಮತದ ವೇಳೆ ಪಕ್ಷದ ಪರ ಮತ ಹಾಕುವುದಾಗಿ ಅವರು ನಾಯಕರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಹೀಗಾಗಿ ಇಂದು ನಡೆಯುವ ವಿಶ್ವಾಸ ಮತದ ವೇಳೆ ರಾಮಲಿಂಗಾ ರೆಡ್ಡಿ ಸರ್ಕಾರದ ಪರ ಮತ ಹಾಕಲಿದ್ದಾರೆ ಎನ್ನಲಾಗಿದೆ.
ಉಳಿದಂತೆ ಬೆಂಗಳೂರಿನ ಶಾಸಕರಾದ ಮುನಿರತ್ನ, ಎಸ್.ಟಿ. ಸೋಮಶೇಖರ್ ಹಾಗೂ ಬೈರತಿ ಬಸವರಾಜ್, ವಿಜಯನಗರ ಶಾಸಕ ಆನಂದ್‌ಸಿಂಗ್ ಕೂಡ ನಿಲುವು ಬದಲಾಯಿಸಲಿದ್ದಾರೆ ಎನ್ನಲಾಗುತ್ತಿದ್ದು, ಆ ಹೊತ್ತಿನಲ್ಲಿ ಪಕ್ಷೇತರರು ಧೋರಣೆ ಬದಲಿಸಬಹುದು ಎಂಬುದು ಮೈತ್ರಿ ನಾಯಕರ ಲೆಕ್ಕಾಚಾರವಾಗಿದೆ. ಈ ಕಾರಣಕ್ಕೆ ಕಲಾಪವನ್ನು ಮುಂದಿನವಾರದವರೆಗೂ ಮುಂದೂಡುವ ಯತ್ನ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos