ರಾಜಕೀಯ

ದೋಸ್ತಿ ಸರ್ಕಾರದ ಅಳಿವು...? ಉಳಿವು..? ಇಂದು ಸಿಎಂ ಎಚ್​ಡಿಕೆ 'ವಿಶ್ವಾಸ' ಪರೀಕ್ಷೆ

Srinivasamurthy VN
ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ದೋಸ್ತಿ ಸರ್ಕಾರಕ್ಕೆ ಇಂದು ಅಗ್ನಿ ಪರೀಕ್ಷೆ ಎದುರಾಗಿದ್ದು, ಅತೃಪ್ತ ಶಾಸಕರ ರಾಜಿನಾಮೆ ಪ್ರಹಸನದ ಬೆನ್ನಲ್ಲೇ ಸಿಎಂ ಎಚ್ ಡಿ ಕುಮಾರಸ್ವಾಮಿ ಇಂದು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
ಈಗಾಗಲೇ ಅತೃಪ್ತ ಶಾಸಕರು ತಮ್ಮ ನಿಲುವು ಸ್ಪಷ್ಟಪಡಿಸಿದ್ದು, ರಾಜಿನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ, ರೆಸಾರ್ಟ್ ನಿಂದ ತಾವು ಬೆಂಗಳೂರಿಗೆ ವಾಪಸ್ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ  ಸರ್ಕಾರ ಉಳಿಸಿಕೊಳ್ಳುವ ಸವಾಲು ಹೊತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ವಿಶ್ವಾಸಮತ ಯಾಚಿಸಲಿದ್ದಾರೆ. ಕುರ್ಚಿ ಉಳಿಸಿಕೊಳ್ಳುವಷ್ಟು ಶಾಸಕರ ಸಂಖ್ಯೆ ಇಲ್ಲದಿದ್ದರೂ, ಈ ಪ್ರಕ್ರಿಯೆಯಲ್ಲಿ ಸಿಗುವ ಒಂದೆರಡು ದಿನಗಳ ಕಾಲಾವಕಾಶ ಬಳಸಿ ಸಿಕ್ಕ ಅವಕಾಶ ಕಾಯ್ದಿಟ್ಟುಕೊಳ್ಳಲು ಭಗೀರಥ ಪ್ರಯತ್ನವನ್ನಂತೂ ಮಾಡಲಿದ್ದಾರೆ.
ಕುತೂಹಲ ಕೆರಳಿಸಿದ ಸುಪ್ರೀಂ ತೀರ್ಪು
ಇನ್ನು ಮಹತ್ವದ ಬೆಳವಣಿಗೆಯಲ್ಲಿ ಬುಧವಾರ ಸುಪ್ರೀಂಕೋರ್ಟ್ ನೀಡಿದ ಮಧ್ಯಂತರ ಆದೇಶ ದೋಸ್ತಿ ಸರ್ಕಾರಕ್ಕೆ ಮತ್ತೆ ಅತಂಕ ತಂದೊಡ್ಡಿದೆ. ಶಾಸಕರನ್ನು ಕಟ್ಟಿಹಾಕಲು ಸೂಕ್ತವಾಗುವಂಥ ತೀರ್ಪನ್ನು ಎದುರು ನೋಡುತ್ತಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಸುಪ್ರೀಂ ತೀರ್ಪು ನಿರಾಸೆ ಮೂಡಿಸಿದ್ದು, ಅತೃಪ್ತ ಶಾಸಕರಿಗೆ ಬಲ ನೀಡಿದಂತಾಗಿದೆ. 
ಒಟ್ಟಾರೆ ಇಂದು ವಿಧಾನಸೌಧದಲ್ಲಿ ನಡೆಯಲಿರುವ ವಿಶ್ವಾಸ ಮತ ಕೇವಲ ರಾಜ್ಯದ ಮಟ್ಟಿಗೆ ಮಾತ್ರವಲ್ಲ, ಇಡೀ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗುವ ಮೂಲಕ ರಾಷ್ಟ್ರೀಯ ಮಾಧ್ಯಮಗಳ ಗಮನ ಕೂಡ ಸೆಳೆದಿದೆ.
SCROLL FOR NEXT