ನಿಖಿಲ್ ಕುಮಾರಸ್ವಾಮಿ ಮತ್ತು ಪ್ರತಾಪ್ ಸಿಂಹ
ಮೈಸೂರು: ನಮ್ಮ ತಂದೆಯನ್ನು ನೀವು ಬೆಳೆಸಿದ್ದೀರಿ. ಅವರು ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಎದುರಿಸಲು ಸಿದ್ದನಿದ್ದೇನೆ, ಜನ ಸೇವೆಗೆ ನನಗೂ ಒಂದು ಅವಕಾಶ ಕೊಡಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ನಡೆದ ಮೈಸೂರಿನಲ್ಲಿ ನಡೆದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೈಸೂರಿನ ಮೂಲಕ ರಾಜಕೀಯ ಪ್ರವೇಶಿಸುವ ಇಂಗಿತವನ್ನು ಅವರು ಬಹಿರಂಗವಾಗಿಯೇ ಹೊರ ಹಾಕಿದ್ದಾರೆ. ನಾನು ರಾಜಕೀಯದಲ್ಲಿ ಈಗ ಕಣ್ಣು ಬಿಡುತ್ತಿದ್ದೇನೆ. ನಾನೇನಾದರೂ ತಪ್ಪು ಮಾತನಾಡಿದ್ದರೆ ಕ್ಷಮಿಸಿ ಎಂದರು.
ಇದಕ್ಕೂ ಮೊದಲು ಮಾತನಾಡಿದ್ದ ಸಚಿವ ಜಿ.ಟಿ ದೇವೇಗೌಡ, ” ನಾವೆಲ್ಲ ಒತ್ತಾಯ ಮಾಡಿದ್ದೇವೆ. ದೊಡ್ಡವರು (ದೇವೇಗೌಡರು) ಮೈಸೂರಿಗೆ ಬರಬೇಕು. ದೊಡ್ಡವರು ಬರಲು ಸಾಧ್ಯವಾಗದೇ ಇದ್ದರೆ ನಿಖಿಲ್ ಕುಮಾರಸ್ವಾಮಿ ಅವರನ್ನಾದರೂ ಕಳುಹಿಸಿಕೊಡಬೇಕು. ನಾವು ಗೆಲ್ಲಿಸಿಕೊಡುತ್ತೇವೆ ಎಂದು ಹೇಳಿದರು.
ನಿಖಿಲ್ ಅವರನ್ನು ಮಂಡ್ಯದಿಂದ ಲೋಕಸಭೆ ಕಣಕ್ಕಿಳಿಸಲು ಜೆಡಿಎಸ್ ಯೋಜನೆ ರೂಪಿಸುತ್ತಿದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಅಲ್ಲಿ ಸುಮಲತಾ ಅವರು ಈ ಬಾರಿ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಟಿಕೆಟ್ ನೀಡದಿದ್ದರೂ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ,. ಈ ಹಿನ್ನೆಲೆಯಲ್ಲಿ ಮಂಡ್ಯ ಬದಲು ನಿಖಿಲ್ ಕುಮಾರ್ ಸ್ವಾಮಿಗೆ ಮೈಸೂರಿನಿಂದ ಸ್ಪರ್ಧಿಸಲು ವೇದಿಕೆ ಸಿದ್ದ ಪಡಿಸಲಾಗುತ್ತಿದೆ.
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ಉತ್ತಮ ಬೆಂಬಲವಿದೆ, ಹೀಗಾಗಿ ನಿಖಿಲ್ ಗೆಲುವು ಅನಾಯಾಸ ಎಂದು ಜೆಡಿಎಸ್ ನಂಬಿದೆ. ಮೈಸೂರು- ಕೊಡಗು ಕ್ಷೇತ್ರದ ಟಿಕೆಟ್ ನಿಖಿಲ್ ಗೆ ನೀಡಿದರೇ, ಬಿಜೆಪಿಯ ಹಾಲಿ ಸಂಸದ ಪ್ರತಾಪ್ ಸಿಂಹ ಮತ್ತು ನಿಖಿಲ್ ನಡುವೆ ತೀವ್ರ ಪೈಪೋಟಿ ಎದುರಾಗಲಿದೆ.