ರಾಜಕೀಯ

ತುಮಕೂರು ಕ್ಷೇತ್ರ ಪಡೆಯಲು ಡಿಸಿಎಂ ಪರಮೇಶ್ವರ್ ಹರಸಾಹಸ

Lingaraj Badiger
ಬೆಂಗಳೂರು: ತುಮಕೂರಿನಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೇ ಸ್ಪರ್ಧಿಸಿದರೆ ತಾವೂ ಅವರಿಗೆ ಬೆಂಬಲ ನೀಡಲು ಸಿದ್ದರಿದ್ದೇವೆ. ಸ್ಪರ್ಧಿಸದಿದ್ದರೆ ಕ್ಷೇತ್ರವನ್ನು ಕಾಂಗ್ರೆಸ್ ಗೆ ವಾಪಸ್ ನೀಡುವಂತೆ ಜೆಡಿಎಸ್‌ ವರಿಷ್ಠರಲ್ಲಿ ಮನವಿ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.
ಇಂದು ನಗರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, 10 ಹಾಲಿ ಸಂಸದರಿಗೆ ಟಿಕೆಟ್ ನೀಡುವಂತೆ ಪರಿಶೀಲನಾ ಸಮಿತಿ ರಾಹುಲ್ ಗಾಂಧಿ ಅವರಿಗೆ ಶಿಫಾರಸ್ಸು ಮಾಡಿತ್ತು. ಆದರೆ ದೇವೇಗೌಡ ಅವರು ರಾಹುಲ್‌ ಗಾಂಧಿ ಅವರೊಂದಿಗೆ‌ ಮಾತನಾಡಿ ತುಮಕೂರನ್ನು ಜೆಡಿಎಸ್‌ ತೆಕ್ಕೆಗೆ ಪಡೆದು ಕೊಂಡಿದ್ದಾರೆ. ಒಂದು ವೇಳೆ ದೇವೇಗೌಡ ಅವರೇ ತುಮಕೂರಿನಿಂದ ಸ್ಪರ್ಧಿಸುವುದಾದರೆ ಸ್ವಾಗತಾರ್ಹ.‌ ಅವರಿಗಾಗಿ‌ ನಾವೆಲ್ಲರೂ ಕೆಲಸ ಮಾಡುತ್ತೇವೆ. ಇಲ್ಲವಾದರೆ ನಮ್ಮ ಹಾಲಿ ಸಂಸದರಿಗೇ ಕ್ಷೇತ್ರ ಬಿಟ್ಟುಕೊಡುವಂತೆ ದೇವೇಗೌಡರಲ್ಲಿಯೂ‌ ಮನವಿ ಮಾಡಿದ್ದೇನೆ. ಅಗತ್ಯ ಬಿದ್ದರೆ ರಾಹುಲ್‌ ಗಾಂಧಿ ಅವರನ್ನು ಸಹ ಭೇಟಿ ಮಾಡುವುದಾಗಿ ಅವರು ತಿಳಿಸಿದರು. 
ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ತುಮಕೂರು ಕ್ಷೇತ್ರ ವಾಪಾಸ್ ಕಾಂಗ್ರೆಸ್ ಗೆ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಸಂಸದ ಮುದ್ದಹನುಮೇಗೌಡ, ಕ್ಷೇತ್ರ ಏಕೆ? ಹೇಗೆ ಕೈ ತಪ್ಪಿತು ಎಂದು  ತಾವು ಹೇಳುವುದು ಸರಿಯಾದ ಕ್ರಮವಲ್ಲ. ತಮಗೆ ಮತ್ತೆ ಕ್ಷೇತ್ರವನ್ನು ವಾಪಸ್ ನೀಡುತ್ತಾರೆ ಎಂಬ ಭರವಸೆಯಿದೆ. ತಾವೂ ಸಹ ಮಾಜಿ ಪ್ರಧಾನಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತನಾಡಿರುವುದಾಗಿ ತಿಳಿಸಿದರು.
ಮೈಸೂರು  ಉಳಿಸಿಕೊಳ್ಳಲು ಪರ್ಯಾಯವಾಗಿ ತುಮಕೂರನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿದೆಯೇ ಎಂಬ ಪ್ರಶ್ಮಗೆ  ಪ್ರತಿಕ್ರಿಯಿಸಿದ ಅವರು, ಮೈಸೂರನ್ನು ತಂದು ತುಮಕೂರಿಗೆ ಸಂಕರ್ಪ ಮಾಡುವುದು ಸರಿಯಾದ ಕ್ರಮವಲ್ಲ. ಯಾರ ಯಾರ  ಲಿಂಕ್ ಎಲ್ಲಿರುತ್ತೋ ಗೊತ್ತಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಸಂಸತ್ ಅಧಿವೇಶನದ ಕೊನೆಯ ಕಲಾಪದವರೆಗೆ ತಾವು ಪ್ರಮಾಣಿಕವಾಗಿ ಕೆಲಸ ಮಾಡಿದ್ದು, ಈಗಲೂ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದೇನೆ. ಒಂದು ವೇಳೆ ತುಮಕೂರಿನಿಂದ ದೇವೇಗೌಡರು ಸ್ಪರ್ಧೆ ಮಾಡಿದರೆ ಕ್ಷೇತ್ರ ಬಿಟ್ಟುಕೊಡಲು ಸಿದ್ದರಿದ್ದೇವೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಇದಕ್ಕಿಂತ ಹೆಚ್ಚಿಗೆ ತಾವೇನು ಹೇಳಲು ಬಯಸುವುದಿಲ್ಲ ಎಂದು  ತುಮಕೂರು ಸಂಸದ ಮುದ್ದಹನುಮೇಗೌಡ ತಿಳಿಸಿದ್ದಾರೆ.
SCROLL FOR NEXT