ರಾಜಕೀಯ

ಉಮೇಶ್ ಜಾಧವ್ ಗೋಮುಖ ವ್ಯಾಘ್ರ: ಮಾಜಿ ಸಿಎಂ ಸಿದ್ದರಾಮಯ್ಯ

Sumana Upadhyaya
ಕಲಬುರಗಿ:ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಕದನ ಕ್ಷೇತ್ರ ಈ ಬಾರಿ ಭಾರೀ ರೀತಿಯಲ್ಲಿ ಸದ್ದು ಮಾಡುತ್ತಿದೆ. ಡಾ.ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಗುಲ್ಬರ್ಗ ಲೋಕಸಭೆಗೆ ಬಿಜೆಪಿಯಿಂದ ಸ್ಪರ್ಧಿಸಿದ ನಂತರ ಸಹಜವಾಗಿ ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಕಲಬುರಗಿ ಜಿಲ್ಲೆ ಚಿಂಚೋಳಿಯಯ ಕುಂಚಾವರಂ ತಾಂಡಾದಲ್ಲಿ ಸಿದ್ದರಾಮಯ್ಯ ನಿನ್ನೆ ಚುನಾವಣೆ ಪ್ರಚಾರ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಡಾ ಉಮೇಶ್ ಜಾಧವ್ ಗೋಮುಖ ವ್ಯಾಘ್ರ ಎಂದು ಬಣ್ಣಿಸಿದರು. ರಾಜಕೀಯಕ್ಕೆ ಕರೆತಂದು ಎರಡು ಬಾರಿ ಶಾಸಕರಾಗಿ ಮಾಡಿದ ಕಾಂಗ್ರೆಸ್ ಗೆ ಉಮೇಶ್ ಜಾಧವ್ ದ್ರೋಹ ಬಗೆದಿದ್ದಾರೆ. ಅವರು ಮೊದಲು ಶಾಸಕರಾದಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಹಿಂದಿನಿಂದ ಚೂರಿಯಿಂದ ಇರಿದು ಅಧಿಕಾರ ಮತ್ತು ಹಣ ಲೂಟಿ ಹೊಡೆಯಲು ಬಿಜೆಪಿ ಸೇರಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಲೋಕಸಭಾ ಚುನಾವಣೆ ಬಳಿಕ ಉಮೇಶ್‌ ಜಾಧವ್‌ ಬೀದಿ ಪಾಲಾಗುತ್ತಾನೆ. ಅಪ್ಪ ಲೋಕಸಭಾ ಚುನಾವಣೆಯಲ್ಲಿ, ಮಗ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತಾನೆ ಎಂದು ಕೂಡ ಭವಿಷ್ಯ ಹೇಳಿದ್ದಾರೆ. ಚುನಾವಣೆಯಲ್ಲಿ ಅಪ್ಪ-ಮಗ ಇಬ್ಬರೂ ಸೋತು, ಬೀದಿಗೆ ಬರುತ್ತಾರೆ. ವ್ಯಕ್ತಿಗೆ ಉಪಕಾರ ಮಾಡಿದರೆ ಅದನ್ನು ನೆನಪಿಸಿಕೊಳ್ಳುವ ಮಾನವೀಯತೆ ಇರಬೇಕು. ಆದರೆ ಉಮೇಶ್‌ ಜಾಧವ್‌ನಲ್ಲಿ ಅದು ಯಾವುದು ಇಲ್ಲ ಎಂದರು. ನಾನು ಮುಖ್ಯಮಂತ್ರಿಯಾಗಿದ್ದಾಗ, ಜಾಧವ್‌ ಈ ಕ್ಷೇತ್ರಕ್ಕೆ ಕೇಳೀದಷ್ಟು ಅನುದಾನ ನೀಡಿದ್ದೆ. ಆತ ಸಂಭಾವಿತ ವ್ಯಕ್ತಿ ಎಂದುಕೊಂಡಿದ್ದೆ. ಆದರೆ ಈಗ ಗೊತ್ತಾಯಿತು. ಆತ ಗೋಮುಖ ವ್ಯಾಘ್ರ ಎಂದು ಕಿಡಿಕಾರಿದರು.
SCROLL FOR NEXT