ರಾಜಕೀಯ

ಬಿಜೆಪಿ ಕುದುರೆ ವ್ಯಾಪಾರ, ಬಿಎಸ್ ವೈ ಆಡಿಯೋ ಬಗ್ಗೆ ರಾಷ್ಟ್ರಪತಿಗೆ ದೂರು: ಸಿದ್ದರಾಮಯ್ಯ

Lingaraj Badiger

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಆಪರೇಷನ್ ಕಮಲ ಕುರಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಯನ್ನೊಳಗೊಂಡ ಆಡಿಯೋ, ವಿಡಿಯೋ ದಾಖಲೆಯನ್ನು ಬಿಎಸ್ ವೈ ಸರ್ಕಾರದ ವಿರುದ್ಧ ದಾಳವಾಗಿ ಉರುಳಿಸಲು ಕಾಂಗ್ರೆಸ್ ನಿರ್ಧರಿಸಿದ್ದು, ಈ ಹೋರಾಟವನ್ನು ರಾಷ್ಟ್ರಪತಿ ಅಂಗಳದವರೆಗೆ ಕೊಂಡೊಯ್ಯಲು ಮುಂದಾಗಿದೆ.

ಆಪರೇಷನ್ ಕಮಲ ಆಡಿಯೋ ಒಂದು ಕಡೆ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ನಿರೂಪಿಸಿದ್ದು, ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ವ್ಯೂಹ ರೂಪಿಸಲು ಕಾಂಗ್ರೆಸ್ ತಂತ್ರಗಾರಿಕೆಯಲ್ಲಿ ತೊಡಗಿದೆ.

ಈಗಾಗಲೇ ಆಪರೇಷನ್ ಕಮಲ ಕುರಿತ ಹೇಳಿಕೆಯನ್ನು ಸುಪ್ರೀಂಕೋರ್ಟ್ ಸಾಕ್ಷ್ಯವಾಗಿ ಪರಿಗಣಿಸುವಂತೆ ಮನವಿ ಮಾಡಿರುವ ಕಾಂಗ್ರೆಸ್, ಮೈತ್ರಿ ಸರ್ಕಾರದ ಪತನಕ್ಕೆ ಯಡಿಯೂರಪ್ಪ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರಣ ಎಂದು ರಾಷ್ಟ್ರಪತಿ ಅವರಿಗೆ ದೂರು ಸಲ್ಲಿಸಲು ನಿರ್ಧರಿಸಿದೆ.

ಈ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಗುರುವಾರ ಕಾಂಗ್ರೆಸ್ ನಾಯಕರು ಸಮಾಲೋಚನೆ ನಡೆಸಿದರು. ಸಧ್ಯಕ್ಕೆ ರಾಷ್ಟ್ರಪತಿ ಅವರಿಗೆ ದೂರು ನೀಡುವ ಬಗ್ಗೆ ಮಾತ್ರ ಚರ್ಚೆ ಮಾಡಲಾಗಿದ್ದು, ಉಪ ಚುನಾವಣೆ ವಿಚಾರದ ಬಗ್ಗೆ ನ್ಯಾಯಾಲಯದ ತೀರ್ಪು ಹೊರ ಬಂದ ನಂತರ ಚರ್ಚಿಸಲು ನಿರ್ಧರಿಸಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು,
ಯಡಿಯೂರಪ್ಪ ಆಡಿಯೋ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಬಿಎಸ್ವೈ, ಅಮಿತ್ ಶಾ ಸೇರಿ ಸರ್ಕಾರ ಬೀಳಿಸಲು ಯತ್ನಿಸಿದ್ದಾರೆ. ಇದು 10ನೇ ಶೆಡ್ಯೂಲ್ನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು.

ಬಿಜೆಪಿಯ ಕುದುರೆ ವ್ಯಾಪಾರ ಮತ್ತು ಆಪರೇಷನ ಕಮಲಕ್ಕೆ ಸಂಬಂಧಿಸಿದ ಯಡಿಯೂರಪ್ಪ ಅವರ ಆಡಿಯೋ ಕ್ಲಿಪ್ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರಿಗೆ ದೂರು ನೀಡುತ್ತೇವೆ. ಅಮಿತ್ ಶಾ ಕೇಂದ್ರ ಸಚಿವರಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದನ್ನು ರಾಷ್ಟ್ರಪತಿಗಳಿಗೆ ಮನದಟ್ಟು ಮಾಡಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

SCROLL FOR NEXT