ರಾಜಕೀಯ

ಮೈತ್ರಿ ಪಕ್ಷಗಳ ವೈಫಲ್ಯದಿಂದಾಗಿ ರಾಜ್ಯದಲ್ಲಿ ಉಪ ಚುನಾವಣೆ- ಮುರಳೀಧರ್ ರಾವ್ 

Nagaraja AB

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್  ಪಕ್ಷಗಳ  ವೈಫಲ್ಯ ಮತ್ತು ಈ  ಪಕ್ಷಗಳ ನಾಯಕತ್ವ ವೈಫಲ್ಯದಿಂದ ರಾಜ್ಯದಲ್ಲಿ  15 ವಿಧಾನಸಭಾ  ಕ್ಷೇತ್ರಗಳಿಗೆ ಉಪ  ಚುನಾವಣೆ ನಡೆಯುತ್ತಿದೆ. ಉಪ ಚುನಾವಣೆ ಎದುರಾಗಲು ಕಾಂಗ್ರೆಸ್ ಜೆಡಿಎಸ್  ಕಾರಣವಾಗಿವೆ. ಈ  ಸತ್ಯವನ್ನು ತಿರುಚುವ ಇಲ್ಲವೇ ದಾರಿತಪ್ಪಿಸುವ ಯಾವುದೇ  ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ  ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ  ಬಿಜೆಪಿ ಉಸ್ತುವಾರಿ  ಪಿ.ಮುರಳೀಧರ್ ರಾವ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ  ವಿಧಾನಸಭಾ  ಚುನಾವಣೆಯಲ್ಲಿ  ಕಾಂಗ್ರೆಸ್  ಮತ್ತು  ಜೆಡಿಎಸ್  ಪಕ್ಷಗಳನ್ನು ಮತದಾರರು  ಸಂಪೂರ್ಣವಾಗಿ  ತಿರಸ್ಕರಿಸಿದ್ದರು.  ಬಿಜೆಪಿ ಪರ ಜನಾದೇಶ ನೀಡಿದ್ದರೂ ಅಪವಿತ್ರ ಮೈತ್ರಿಮಾಡಿ ಕೊಂಡು ಎರಡೂ  ಪಕ್ಷಗಳು ಸರ್ಕಾರ ರಚಿಸಿದ್ದವು. ಬಿಜೆಪಿಯನ್ನು ಆರೋಪಿಸುವ  ಮುನ್ನ, ಸಿದ್ದರಾಮಯ್ಯ ಅವರು ಸಮ್ಮಿಶ್ರ  ಸರ್ಕಾರ ಪತನಗೊಂಡಿದ್ದೇಕೆ ? ಪಕ್ಷದ ಶಾಸಕರು ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇಕೆ?  ಎಂಬ ಬಗ್ಗೆ  ಆತ್ಮಾವಲೋಕನ  ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣರಾಗಿದ್ದಾರೆ. ಅವರು ಸಮ್ಮಿಶ್ರ ಸರ್ಕಾರವನ್ನು ಒಪ್ಪಿಕೊಂಡಿರಲಿಲ್ಲ  ಮತ್ತು  ಜೀರ್ಣಿಸಿ ಕೊಂಡಿರಲಿಲ್ಲ. 17  ಶಾಸಕರು ಸರ್ಕಾರದ ವೈಫಲ್ಯ ಪ್ರತಿಭಟಿಸಿ, ಶಾಸಕತ್ವಕ್ಕೆ ರಾಜೀನಾಮೆ ನೀಡಿ ಹೊಸ ಆಲೋಚನೆಯೊಂದಿಗೆ ಬಿಜೆಪಿ  ಸೇರಿ ಚುನಾವಣೆಗೆ ಮತ್ತೆ ಸ್ಪರ್ಧಿಸಿದ್ದಾರೆ. ಸರ್ಕಾರ ಬೀಳುವುದಕ್ಕೆ  ಬಿಜೆಪಿ ಕಾರಣವಲ್ಲ. ಸಿದ್ದರಾಮಯ್ಯ ಹತಾಶರಾಗಿ ಸುಳ್ಳು ಆರೋಪ ಗಳನ್ನು ಮಾಡುತ್ತಿದ್ದಾರೆ. ದಿನನಿತ್ಯ  ಮಾಧ್ಯಮಗಳಲ್ಲಿ ಹಣೆಬರಹದಲ್ಲಿ ಬರಲು ಅವರು ಈ ರೀತಿಯ  ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ  ಯಾರಿಗೂ ಮಧ್ಯಂತರ  ಚುನಾವಣೆ  ಬೇಕಿಲ್ಲ.  ಸ್ಥಿರ ಮತ್ತು  ಜನಪರ  ಸರ್ಕಾರ  ಬೇಕಿದೆ. ಇದು  ಬಿಜೆಪಿಯಿಂದ  ಮಾತ್ರ ಸಾಧ್ಯ.  ಬಿಜೆಪಿ  ಎಲ್ಲ  15 ಕ್ಷೇತ್ರಗಳಲ್ಲಿ  ಜಯಗಳಿಸಲಿದೆ.ಕಾಂಗ್ರೆಸ್  ತಾನು  ಸ್ಪರ್ಧಿಸಿರುವ 12 ಕ್ಷೇತ್ರಗಳಲ್ಲಿ ಗೆಲ್ಲಲಿದೆಯೇ  ಎಂಬ  ಸವಾಲು  ಸಿದ್ದರಾಮಯ್ಯ  ಸ್ವೀಕರಿಸುವರೇ?  ಈ  ಕ್ಷೇತ್ರಗಳಲ್ಲಿ  ಕಾಂಗ್ರೆಸ್  ಗೆಲ್ಲದಿದ್ದರೆ ಸಿದ್ದರಾಮಯ್ಯ  ಜನರಿಗೆ  ಏನು ಉತ್ತರ ನೀಡುತ್ತಾರೆ?  ಎಂದು ಸವಾಲು ಹಾಕಿದರು.

ಕಳೆದ  ಮೂರು  ತಿಂಗಳಲ್ಲಿ  ರಾಜ್ಯದಲ್ಲಿನ  ಬಿಜೆಪಿ ಸರ್ಕಾರ ತನ್ನ ಬದ್ಧತೆಗಳನ್ನು  ಈಡೇರಿಸುವತ್ತ ಸಾಗಿದೆ. ಸರ್ಕಾರ  ರಚನೆಯಾಗುತ್ತಿದ್ದಂತೆ  ರಾಜ್ಯದಲ್ಲಿ  ಪ್ರವಾಹಗಳು ಎದುರಾದವು. ರಾಜ್ಯ ಸರ್ಕಾರ  ಹಾನಿಗೊಂಡ ಮನೆಗಳಿಗೆ  5 ಲಕ್ಷ  ರೂ.  ಪರಿಹಾರ  ಪ್ರಕಟಿಸಿದೆ.  ಮನೆ  ಕಾಮಗಾರಿ  ಪೂರ್ಣಗೊಳ್ಳುವವರೆಗೆ 10 ತಿಂಗಳು ಬಾಡಿಗೆ ಹಣವನ್ನೂ ನೀಡುತ್ತಿದೆ. ಇಂತಹ  ಪರಿಹಾರ  ಯೋಜನೆ  ದೇಶದ  ಯಾವುದೇ  ರಾಜ್ಯದಲ್ಲಿ  ಇಲ್ಲ. ಸಂತ್ರಸ್ತರಿಗೆ ಔಷಧ ಮತ್ತು ಇತರ ಅಗತ್ಯವಸ್ತುಗಳನ್ನು ಪೂರೈಸಿದೆ ಎಂದರು.

ಜಾನುವಾರುಗಳಿಗೆ  ಮೇವು, ಆಶ್ರಯವನ್ನು  ಒದಗಿಸಿದೆ.  ಸರ್ಕಾರ  ಸಂವೇದನಾಶೀಲ  ಮತ್ತು  ಜನ ಕೇಂದ್ರೀಕೃತವಾಗಿದೆ.  ಬೆಂಗಳೂರಿನಲ್ಲಿ ಮೂಲ ಸೌಕರ್ಯ  ಹೆಚ್ಚಿಸಿ ಭವಿಷ್ಯದ ನಗರವನ್ನಾಗಿ ರೂಪಿಸುವ  ಗುರಿಯನ್ನು  ಸರ್ಕಾರ  ಹೊಂದಿದೆ. ಕೇಂದ್ರದಲ್ಲೂ ಬಿಜೆಪಿ  ಸರ್ಕಾರವಿರುವುದರಿಂದ  ರಾಜ್ಯಕ್ಕೆ  ಹೆಚ್ಚಿನ ಅನುದಾನ  ಮತ್ತು  ಸಹಕಾರ ದೊರೆಯಲಿದೆ.  ಎರಡೂ  ಸರ್ಕಾರಗಳು  ಡಬಲ್  ಇಂಜಿನ್ ನಂತೆ ಕೆಲಸ ಮಾಡಲಿವೆ ಎಂದು ಭರವಸೆ ನೀಡಿದರು.

SCROLL FOR NEXT