ರಾಜಕೀಯ

ಹೌದು ಕಣ್ಣೀರು ನಮ್ಮ ಕುಟುಂಬದ ಪೇಟೆಂಟ್: ಹೆಚ್ ಡಿ ಕುಮಾರಸ್ವಾಮಿ ತಿರುಗೇಟು 

Sumana Upadhyaya

ಮೈಸೂರು: ಕುಮಾರಸ್ವಾಮಿ ಕುಟುಂಬ ಚುನಾವಣೆ ಸಮಯ ಬಂದಾಗ ಅಳುವುದು ಸಾಮಾನ್ಯ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.


ಹೌದು ಕಣ್ಣೀರು ನಮ್ಮ ಕುಟುಂಬದ ಪೇಟೆಂಟ್, ಸದಾನಂದಗೌಡರ ರೀತಿ ಎಲ್ಲದಕ್ಕೂ ಹಲ್ಲು ಬಿಟ್ಟುಕೊಂಡು ನಿಂತುಕೊಳ್ಳುವುದಿಲ್ಲ. ಸದಾನಂದಗೌಡರೇ ವಿಕ್ಸ್​ ಅಥವಾ ಗ್ಲಿಸರಿನ್​ ಹಾಕಿಕೊಂಡು ಕಣ್ಣೀರು ಹಾಕುವ ಅವಶ್ಯಕತೆ ನನಗೆ ಇಲ್ಲ. ಬಡವರ ಕಷ್ಟ ನೋಡಿದ ತಕ್ಷಣ ನನಗೆ ಕಣ್ಣೀರು ಬರುತ್ತದೆ. ನೀವು ಬಂದಿರುವುದು ನಾಟಕ ಆಡುವ ಕಡೆಯಿಂದ. ನಿಮಗೆ ಮಾನವೀಯತೆ ಗೊತ್ತಿದ್ದರೆ ತಾನೇ ಕಣ್ಣೀರು ಬರೋದು. ಎಷ್ಟು ಜನ ಬಡವರು ನಿಮ್ಮ ಮನೆ ಹತ್ತಿರ ಬರುತ್ತಾರೆ? ನಿಮ್ಮ ಕೇಂದ್ರದ ಗೂಢಾಚಾರಿಗಳನ್ನು ನಮ್ಮ ಮನೆ ಹತ್ತಿರ ಕಳುಹಿಸಿ ಆಗ ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಇಷ್ಟಕ್ಕೇ ಸುಮ್ಮನಾಗದ ಕುಮಾರಸ್ವಾಮಿ, ನನ್ನದು ಡ್ರಾಮಾ ಕಣ್ಣೀರಲ್ಲ. ನಿಮ್ಮಿಂದ ನಾನು ಪಾಠ ಕಲಿಯಬೇಕಿಲ್ಲ. ಪ್ರವಾಹಪೀಡಿತ ಎಷ್ಟು ಹಳ್ಳಿಗಳಿಗೆ ಹೋಗಿದ್ದೀರಿ? ಹೌದು, ನಾನು ಕಣ್ಣೀರು  ಹಾಕ್ತಿನಿ ಅದು‌ ಜನರಿಗಾಗಿ ಹಾಕುವ ಕಣ್ಣೀರು. ನಿಮಗೆ ಹೃದಯ ಇದ್ದರೆ ತಾನೆ ಕಣ್ಣೀರು ಬರುವುದು. ನಿಮಗೆ  ಗ್ಲಿಸರಿನ್​​ ವಿಕ್ಸ್​​ ಬೇಕು. ಸದಾನಂದಗೌಡರನ್ನಾಗಲಿ ಬಿಜೆಪಿಯವರನ್ನಾಗಿ ಮೆಚ್ಚಿಸೋಕೆ ನಾನು ಬದುಕಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.


ನಾನೇನು ಕಾಂಗ್ರೆಸ್ ಮನೆ ಬಾಗಿಲಿಗೆ ಹೋಗಿ ಸಿಎಂ ಮಾಡಿ ಅಂತ ಕೇಳಿರಲಿಲ್ಲ. ಅವರಿಗೆ ಬಹುಮತ ಬರಲಿಲ್ಲ ಅಂತ ಅವರೇ ಬಂದಿದ್ದರು. ನಮ್ಮ‌ ತಂದೆ ನನ್ನ ಮಗನಿಗೆ ಹೃದಯ ಚಿಕಿತ್ಸೆ ಆಗಿದೆ ನೀವೆ ಯಾರಾದರೂ ಸಿಎಂ ಆಗಿ ಅಂದರು. ಆದರೂ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಹಠ ಮಾಡಿ ನನಗೆ ಸಿಎಂ ಪಟ್ಟ ಕಟ್ಟಿದರು. ಆಗ ನಾನು ಕಾಂಗ್ರೆಸ್ ಆಫರ್ ಒಪ್ಪಿಕೊಂಡಿದ್ದು ಜನರಿಗೆ ಕೊಟ್ಟಿದ್ದ ಭರವಸೆ ಈಡೇರಿಸಲು. ಅದು ಸಹ ಸಾಲ ಮನ್ನಾಮಾಡಲು ಸಿಎಂ ಆಗಲು ಒಪ್ಪಿದೆ. ಸಿಎಂ ಆದ ತಕ್ಷಣ 40 ಸಾವಿರ ಕೋಟಿಯಷ್ಟು ಸಾಲಮನ್ನಾ ಮಾಡಿದೆ‌. ಅಂದರೆ ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಹಾಗಾಗಿ ಸ್ಥಿರ ಸರ್ಕಾರಕ್ಕೆ ಮತ ಹಾಕಿ ಎಂದು ಮತದಾರರಲ್ಲಿ ಮನವಿ ಮಾಡಿದರು.

SCROLL FOR NEXT