ರಾಜಕೀಯ

ರಾವಣನೇ ಹಾಳಾಗಿದ್ದಾನೆ, ಇನ್ನು ಸವದಿ ಯಾವ ಲೆಕ್ಕ?: ರಮೇಶ್ ಜಾರಕಿಹೊಳಿ

Manjula VN

ಬೆಳಗಾವಿ: ವಿಧಾನಸಬೆ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ್ ಸವದಿಗೆ ಅವರ ಸ್ಥಾನದ ಮಹತ್ವ ಗೊತ್ತಿಲ್ಲ. ಆತ ಕನಸಿನಲ್ಲೇ ಉಪ ಮುಖ್ಯಮಂತ್ರಿಯಾಗಿದ್ದೇನೆಂದು ತಿಳಿದಿದ್ದಾನೆಂದು ಗೋಕಾಕ್ ಕ್ಷೇತ್ರದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿಯವರು ಕಿಡಿಕಾರಿದ್ದಾರೆ. 

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರ ಬಗ್ಗೆ ಮಾತನಾಡುವ ನೈತಿಕ ಹ ಕ್ಕು ಸವದಿಗೆ ಇಲ್ಲ. ಹತ್ತು ತಲೆ ರಾವಣನೇ ಹಾಳಾಗಿದ್ದಾನೆ. ಇನ್ನು ಲಕ್ಷ್ಮಣ ಸವದಿ ಯಾವ ಲೆಕ್ಕ ಎಂದು ಪ್ರಶ್ನಿಸಿದರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅನರ್ಹಶಾಸಕರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. 

ಇದೇ ವೇಳೆ ಸವದಿ ವಿರುದ್ದ ಕೆಂಡಕಾರಿದ್ದ ಬಿಜೆಪಿ ನಾಯಕ ಉಮೇಶ್ ಕತ್ತಿಯವರ ಹೇಳಿಕೆಗೆ ಜಾರಕಿಹೊಳಿ ಬೆಂಬಲ ನೀಡಿದ್ದು, ಇತರೆ ನಾಯಕರನ್ನು ಅವಮಾನಿಸುವ ಬದಲು ಸವದಿಯವರು ಮೊದಲು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 

ಬಳಿಕ ಸುಪ್ರೀಂಕೋರ್ಟ್ ಆದೇಶ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ನಿಗದಿಯಂತೆಯೇ ಡಿಸೆಂಬರ್ ತಿಂಗಳಿನಲ್ಲಿ ಉಪ ಚುನಾವಣೆ ನಡೆಯಲಿದೆಯೇ ಅಥವಾ ಮುಂದೂಡಲಾಗುತ್ತದೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ, ಸಿದ್ಧತೆ ನಡೆಸಲು ನಾನು ನಿರ್ಧರಿಸಿದ್ದೇನೆ. ಗೋಕಾಕ್ ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾಮಕ್ಕೂ ಅ.30-31ರಂದು ತೆರಳಿ ಪ್ರಚಾರ ನಡೆಸುತ್ತೇನೆಂದಿದ್ದಾರೆ. 

ಉಪ ಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧಿಸುವ ವಿಶ್ವಾಸವಿದೆ. ಈ ಬಗ್ಗೆ ಎಲ್ಲಾ ಅನರ್ಹ ಶಾಸಕರು ಮತ್ತೆಮ್ಮೆ ಭೇಟಿಯಾಗಿ ಮಾತುಕತೆ ನಡೆಸಿ, ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

SCROLL FOR NEXT