ರಾಜಕೀಯ

ಉಪ ಸಮರದಲ್ಲಿ ಅನರ್ಹರ ಸ್ಪರ್ಧೆ; ಸೋಮವಾರ ಭವಿಷ್ಯ ನಿರ್ಧಾರ!

Srinivasamurthy VN

ಬೆಂಗಳೂರು: ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಅನರ್ಹ ಶಾಸಕರ ಭವಿಷ್ಯ ಸೋಮವಾರ ನಿರ್ಧಾರವಾಗಲಿದ್ದು, ಇದಕ್ಕೂ ಮುನ್ನವೇ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆಗೆ ದಿನಾಂಕ ಘೋಷಣೆ ಮಾಡಿರುವುದು ಅನರ್ಹಶಾಸಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ರಾಜ್ಯದಲ್ಲಿ ಅನರ್ಹ ಶಾಸಕರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದ್ದು, ನಿನ್ನೆ ಕೇಂದ್ರ ಚುನಾವಣಾ ಆಯೋಗ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆಗೆ ಚುನಾವಣೆ ಘೋಷಣೆ ಮಾಡಿದ ಬೆನ್ನಲ್ಲೇ ಕರ್ನಾಟಕದ ವಿವಿಧ ಕ್ಷೇತ್ರಗಳಿಗೂ ಉಪ ಚುನಾವಣೆ ಘೋಷಣೆ ಮಾಡಿದೆ. 

ಆದರೆ ಹಾಲಿ ಉಪ ಚುನಾವಣೆಯಲ್ಲಿ ಅನರ್ಹಗೊಂಡ ಶಾಸಕರು ಸ್ಪರ್ಧೆ ಮಾಡುವಂತಿಲ್ಲ ಎಂದು ಆಯೋಗ ಸ್ಪಷ್ಟ ಪಡಿಸಿದ್ದು, ಇದು ಅನರ್ಹ ಶಾಸಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದೇ ಸೋಮವಾರ ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಹೀಗಾಗಿ ನ್ಯಾಯಾಲಯ ಯಾವ ತೀರ್ಪುನೀಡಲಿದೆ ಎಂಬುದರ ಮೇಲೆ ಅನರ್ಹ ಶಾಸಕರ ಉಪ ಚುನಾವಣಾ ಸ್ಪರ್ಧೆಯ ಭವಿಷ್ಯ ಅಡಗಿದೆ. 

ಇನ್ನು ನಿನ್ನೆ ಚುನಾವಣಾ ಆಯೋಗ ಉಪ ಸಮರದ ವೇಳಾಪಟ್ಟಿ ಘೋಷಣೆ ಮಾಡಿದ್ದು, ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಅ.21 ರಂದು ಮತದಾನ ನಡೆಯಲಿದ್ದು ಅ.24 ರಂದು ಮತ ಎಣಿಕೆ ನಡೆಯಲಿದೆ.

SCROLL FOR NEXT