ರಾಜಕೀಯ

ಗ್ರಾ.ಪಂ.ಚುನಾವಣೆ: ಉತ್ಸಾಹದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸಿದ ಮೈಸೂರು ಜಿಲ್ಲೆಯ ಬುಡಕಟ್ಟು ಜನರು

Sumana Upadhyaya

ಮೈಸೂರು: ಜಿಲ್ಲೆಯ ಕಾಡುಗಳ ಅಂಚಿನಲ್ಲಿರುವ ಬುಡಕಟ್ಟು ಜನಾಂಗದವರು ನಿನ್ನೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ತಮ್ಮ ಪ್ರದೇಶದಲ್ಲಿ ಈ ಬಾರಿ ಚುನಾಯಿತರಾಗಿ ಬಂದವರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಬಹುದು ಎಂಬ ನಿರೀಕ್ಷೆಯಲ್ಲಿ ಮತದಾರರಿದ್ದಾರೆ.

ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ಮತ್ತು ಹುಣಸೂರು ತಾಲ್ಲೂಕುಗಳ ಹೊರಗಿನ ಅರಣ್ಯ ಪ್ರದೇಶದ ಗ್ರಾಮಗಳಲ್ಲಿ ಬುಡಕಟ್ಟು ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿನವರಿಗೆ ಮೂಲಭೂತ ಸೌಕರ್ಯ, ಸೌಲಭ್ಯ ಎಂಬುದು ಮರೀಚಿಕೆಯಾಗಿತ್ತು. 

ಇದೀಗ ಈ ಬುಡಕಟ್ಟು ಜನಾಂಗದಲ್ಲಿ ಕೆಲವರು ವಿದ್ಯಾವಂತರಾಗಿದ್ದು ತಮಗೆ ಎಲ್ಲರಂತೆ ಮೂಲಭೂತ ಸೌಕರ್ಯ, ಸೌಲಭ್ಯ ಬೇಕು ಎಂದು ಕೇಳುತ್ತಿದ್ದಾರೆ. ವಿದ್ಯಾವಂತ ಯುವಕರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಭಿವೃದ್ಧಿಯ ಆಶಾಕಿರಣವಾಗಿದ್ದಾರೆ. ನಿನ್ನೆ ಬೆಳಗ್ಗೆ 7 ಗಂಟೆಗೆ ಮೊದಲೇ ಮತಗಟ್ಟೆಗಳಿಗೆ ಮತದಾರರು ಆಗಮಿಸಿ ತಮ್ಮ ಹಕ್ಕು ಚಲಾಯಿಸಲು ಮುಂದಾಗಿದ್ದು ವಿಶೇಷವಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಉಮ್ಮತೂರು ಮತಗಟ್ಟೆಯಲ್ಲಿ ಸುಮಾರು 150 ಮತದಾರರ ಸರದಿ ಸಾಲು ನಿಂತು ತಮ್ಮ ಹಕ್ಕು ಚಲಾಯಿಸಲು ಮುಂದಾದರು.

ಅರಣ್ಯ ಹಕ್ಕು ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಲು ಮತ್ತು ಬುಡಕಟ್ಟು ಜನಾಂಗದವರು ದೀರ್ಘ ಸಮಯದಿಂದ ಎದುರಿಸಿಕೊಂಡು ಬಂದಿರುವ ಹಲವು ಸಮಸ್ಯೆಗಳನ್ನು ನಿವಾರಿಸಲು, ತಮಗೆ ವಾಸಸ್ಥಾನದ ಹಕ್ಕುಪತ್ರ ಸಿಗುವಂತಾಗಲು ಸರ್ಕಾರದ ಮೇಲೆ ಒತ್ತಡ ಹಾಕಲು ಸಮರ್ಥ ಅಭ್ಯರ್ಥಿಯನ್ನು ಗೆಲ್ಲಿಸುವುದು ಮುಖ್ಯವಾಗಿದೆ ಎಂಬುದು ಮತದಾರರ ಅಭಿಪ್ರಾಯವಾಗಿದೆ.

ಗ್ರಾಮದ ನಾಗಾಪುರ ಆಶ್ರಮ ಶಾಲೆಯಲ್ಲಿನ ಮತಗಟ್ಟೆಗೆ ತಲುಪಲು ಕೆಲವರು 7-8 ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಾಯಿತು. ಆದರೂ ಉತ್ಸಾಹದಿಂದ ಬಂದು ಮತ ಹಾಕಿದ್ದರು. ಉಮ್ಮತ್ತೂರಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆಂಚೇ ಗೌಡ, ಬೆಳಗ್ಗೆಯಿಂದಲೇ ಜನರು ಬಂದು ಉತ್ಸಾಹದಿಂದ ಮತ ಹಾಕುತ್ತಿದ್ದರು ಎಂದಿದ್ದಾರೆ.

SCROLL FOR NEXT