ರಾಜಕೀಯ

'ಯಡಿಯೂರಪ್ಪನವರು ಪೂರ್ಣ ಅವಧಿಗೆ ಸಿಎಂ ಆಗಿ ಮುಂದುವರಿಯಲಿದ್ದಾರೆ, ಇವೆಲ್ಲಾ ವದಂತಿಯಷ್ಟೆ': ಮುರಳೀಧರ್ ರಾವ್

Sumana Upadhyaya

ಬೆಂಗಳೂರು: ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಅಸಂತುಷ್ಟ ಬಿಜೆಪಿ ಶಾಸಕರು ಒಟ್ಟು ಸೇರಿ ಸಭೆ ನಡೆಸಿದ ನಂತರ ಮತ್ತು ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್ ಯಡಿಯೂರಪ್ಪನವರನ್ನು ಬದಲಿಸಬೇಕೆಂದು ಅನಾಮಧೇಯ ಪತ್ರ ಹರಡಿ ಸುದ್ದಿಯಾದ ನಂತರ ಸಹಜವಾಗಿ ಮಾಧ್ಯಮ ಪ್ರತಿನಿಧಿಗಳು ಬಿಜೆಪಿ ವಕ್ತಾರರು, ಉಸ್ತುವಾರಿ ನಾಯಕರಲ್ಲಿ ಪಕ್ಷದೊಳಗೆ ಏನು ನಡೆಯುತ್ತಿದೆ, ಎಲ್ಲವೂ ಸರಿಯಾಗಿದೆಯೇ ಎಂಬ ಪ್ರಶ್ನೆಗಳನ್ನು ಕೇಳುತ್ತಾರೆ.


ಇದಕ್ಕೆ ನಿನ್ನೆ ಉತ್ತರಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್, ಪಿಎಂ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಯಡಿಯೂರಪ್ಪನವರಿಗೆ 77 ವರ್ಷವಾಗಿದೆ ಎಂದು ಗೊತ್ತಿಲ್ಲವೇ, ಎಲ್ಲಾ ವಿಚಾರಗಳನ್ನು ಪರಿಗಣಿಸಿದ ನಂತರವೇ ಕೇಂದ್ರ ನಾಯಕರು ಅವರನ್ನು ಮುಖ್ಯಮಂತ್ರಿ ಮಾಡಿದ್ದು ಎಂದರು.


ಇನ್ನು ಯಡಿಯೂರಪ್ಪನವರನ್ನು ಮಾರ್ಗದರ್ಶಕ ಮಂಡಲ್ ಗೆ ಕಳುಹಿಸಬೇಕು ಎಂಬ ಸಲಹೆ ಪತ್ರದಲ್ಲಿದ್ದ ಬಗ್ಗೆ ಕೇಳಿದಾಗ, ಯಡಿಯೂರಪ್ಪನವರು ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಉಳಿಯಲಿದ್ದಾರೆ. ಇಂತಹ ಪತ್ರಗಳನ್ನೆಲ್ಲ ನಂಬುವಷ್ಟು ಪಕ್ಷದಲ್ಲಿರುವವರು ಅಷ್ಟೊಂದು ಮೂರ್ಖರೇ, ಇವೆಲ್ಲಾ ನಿಜವಲ್ಲ ಸುಮ್ಮನೆ ವದಂತಿಗಳಷ್ಟೆ ಎಂದರು.


ಪಕ್ಷದ ರಾಜ್ಯ ಘಟಕದಲ್ಲಿ ಅಸಮಾಧಾನ ಭುಗಿಲೆದ್ದಿದೆ, 2008-09ರಲ್ಲಿ ಆದಂತೆ ಯಡಿಯೂರಪ್ಪನವರು ಪೂರ್ಣಾವಧಿಗೆ ಮುನ್ನವೇ ಸಿಎಂ ಹುದ್ದೆ ಬಿಟ್ಟುಕೊಡಬೇಕಾಗುತ್ತದೆ ಎಂದು ಕೇಳಿಬರುತ್ತಿರುವ ಊಹಾಪೋಹಗಳ ಬಗ್ಗೆ ಮುರಳೀಧರ್ ರಾವ್, ಇಂದು ಅಂದಿನ ಹಾಗೆ ಪರಿಸ್ಥಿತಿ ಇಲ್ಲ, ದೆಹಲಿ ಮತ್ತು ಬೆಂಗಳೂರಿನ ಶಕ್ತಿ ಕೇಂದ್ರಗಳಲ್ಲಿ ಬಿಜೆಪಿ ಸುಭದ್ರವಾಗಿದೆ. ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ, ಈಗಿನ ವ್ಯವಸ್ಥೆಯೊಳಗೆ ನಾಯಕತ್ವ ಬದಲಾವಣೆಗೆ ಒತ್ತಡ ಕೂಡ ಇದುವರೆಗೆ ಬಂದಿಲ್ಲ, ಮುಂದೆ ಬರುವುದೂ ಇಲ್ಲ ಎಂದರು.


ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಂದ ಬಂಡಾಯವೆದ್ದು ರಾಜೀನಾಮೆ ನೀಡಿ ಉಪ ಚುನಾವಣೆಯಲ್ಲಿ ಗೆದ್ದು ಬಂದವರಿಗೆ ಸಚಿವ ಹುದ್ದೆ ನೀಡಲಾಗಿದೆ. ಕೆಲವು ನಾಯಕರು ಮಂತ್ರಿಗಿರಿಗೆ ಲಾಬಿ ಮಾಡುತ್ತಿರುವುದು, ಇನ್ನು ಕೆಲವರು ಗುಂಪು ಕಟ್ಟಿಕೊಳ್ಳುವುದು ಇವೆಲ್ಲಾ ಒಂದು ಪಕ್ಷದಲ್ಲಿ ನಡೆಯುವ ಸಹಜ ಪ್ರಕ್ರಿಯೆಗಳಲ್ಲವೇ? ಎಂದು ಕೇಳಿದರು.


ಆದರೆ ರಾಜಕೀಯ ವಿಶ್ಲೇಷಕ ಬಿ ಎಸ್ ಮೂರ್ತಿ ಅವರ ಪ್ರಕಾರ ಯಡಿಯೂರಪ್ಪನವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಆತಂಕ, ತೊಂದರೆಗಳು ಎದುರಾಗುವ ಸಾಧ್ಯತೆಗಳಿವೆ ಎಂದರು.

SCROLL FOR NEXT