ಸಿಟಿ ರವಿ 
ರಾಜಕೀಯ

ತುಕಡೆ ತುಕಡೆ ಗ್ಯಾಂಗ್‌ ಗಳಿಂದ ದೇಶದಲ್ಲಿ ಆಂತರಿಕ ಯುದ್ಧ: ಸಿ‌.ಟಿ.ರವಿ

ದೇಶದಲ್ಲಿ ಸಿಎಎ ವಿರೋಧದ ಹೆಸರಿನಲ್ಲಿ ಕೆಲವು ತುಕಡೆ ಗ್ಯಾಂಗ್ ‌ಗಳಿಂದ ಆಂತರಿಕ ಯುದ್ಧ ಜಾರಿಯಾಗುವ ಭೀತಿ ಎದುರಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸಚಿವ ಸಿ.ಟಿ.ರವಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು: ದೇಶದಲ್ಲಿ ಸಿಎಎ ವಿರೋಧದ ಹೆಸರಿನಲ್ಲಿ ಕೆಲವು ತುಕಡೆ ಗ್ಯಾಂಗ್ ‌ಗಳಿಂದ ಆಂತರಿಕ ಯುದ್ಧ ಜಾರಿಯಾಗುವ ಭೀತಿ ಎದುರಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸಚಿವ ಸಿ.ಟಿ.ರವಿ ಗಂಭೀರ ಆರೋಪ ಮಾಡಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯಿದೆ ಮಾಡುವ ಜಾಗ ಬೀದಿಯಲ್ಲ, ಶಾಹೀನ್‌ಬಾಗ್ ಕೂಡ ಅಲ್ಲ. ಲೋಕಸಭೆಯಲ್ಲಿ ಚರ್ಚೆಯಾಗದೆ ಸಿಎಎ ಅಂಗೀಕಾರಗೊಂಡಿಲ್ಲ. ಕೆಲವು ಶಕ್ತಿಗಳು ಯುದ್ಧಕ್ಕೆ  ಪ್ರಚೋದನೆ ನೀಡುತ್ತಿವೆ. ಸಿಎಎ ವಿರುದ್ಧ ಭಯ ಸೃಷ್ಟಿಸಿ ವಾತಾವರಣ ಹಾಳು ಮಾಡುತ್ತಿವೆ. ಇದರ ಅರಿವಿಲ್ಲದವರೂ ಒಂದಿಷ್ಟು ಜನ ಅರಿವಿದ್ದರೂ ಸ್ವಾರ್ಥಕ್ಕಾಗಿ ಇನ್ನೊಂದಿಷ್ಟು ಜನರು ಭಾಗಿಯಾಗಿದ್ದಾರೆ. ಶತ್ರುಗಳಿಗೂ ಹಾಗೂ ಸ್ನೇಹಿತರಿಗೂ ಒಂದೇ ಕೆಂಪು ಹಾಸಿಗೆ ಹಾಕಲು ಸಾಧ್ಯವಿಲ್ಲ. ತಾವು ಅಕ್ರಮ ವಲಸಿಗರ ಪರ ಎನ್ನುವುದನ್ನು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಸ್ಪಷ್ಟಪಡಿಸಲಿ ಎಂದು ಸವಾಲು  ಹಾಕಿದರು.

ಸಿಎಎ ವಿರುದ್ಧ ಹೋರಾಟದಲ್ಲಿ ಸುಮಾರು 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಸಾವು ಯಾರದ್ದಾದರೂ ಅದು ನೋವು ತರುವ ಸಂಗತಿಯೇ. ಇದರ  ಹಿಂದಿನ ಉದ್ದೇಶ ಮತ್ತು ಷಡ್ಯಂತ್ರ ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.

ಸಿಎಎ ಬಗ್ಗೆ ಗೃಹ ಸಚಿವ  ಅಮಿತ್ ಶಾ ಹಲವು ಬಾರಿ ಸ್ಪಷ್ಟನೆ ನೀಡಿ, ಯಾರಿಗೂ ಇದರಿಂದ ತೊಂದರೆಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಆದರೂ ಹೋರಾಟ ಏಕೆ? ಹೋರಾಟದ ಹಿಂದೆ ಷಡ್ಯಂತ್ರವಿದೆ. ಭಾಷೆಯ  ಹೆಸರಿನಲ್ಲಿ ಸಂಘರ್ಷ ಹುಟ್ಟುಹಾಕುವ ಅಸಹಿಷ್ಣುತೆ ಹೆಸರಿನ ಅವಾರ್ಡ್ ವಾಪಸಿಯೂ ನಡೆಯಿತು. ಇದೆಲ್ಲದರ ಬಳಿಕ ಸಿಎಎ ವಿರೋಧದ ಷಡ್ಯಂತ್ರ ಶುರುವಾಗಿದೆ. ಸಿಎಎ ದೇಶದ ಹೊರಗಿನವರಿಗೆ ಸಂಬಂಧಿಸಿದ ಕಾಯಿದೆ, ದೇಶದೊಳಗಿನವರಿಗೆ ಜಾರಿಯಾಗುವ ಕಾಯಿದೆ ಅಲ್ಲ. ದೇಶದೊಳಗಿನ  ನಾಗರೀಕರಿಗೆ ಅಲ್ಲ ಎಂದ ಮೇಲೆ ಈ ಹೋರಾಟ ಏಕೆ? ಎಂದು ಪ್ರಶ್ನಿಸಿದರು.

ಬಲಾತ್ಕಾರದ ಮತಾಂತರ, ಹೆಣ್ಣು ಮಕ್ಕಳ‌ ಮೇಲಿನ ದೌರ್ಜನ್ಯ ತಡೆಯಲು ಪಾಕ್ ಮತ್ತು ಭಾರತದ ಮಧ್ಯೆ  1950ರಲ್ಲಿ‌  ನೆಹರು ಮತ್ತು ಲಿಯಾಕತ್ ಖಾನ್ ಒಪ್ಪಂದವಾಗಿತ್ತು. ಅದರಂತೆ ಭಾರತದಲ್ಲಿ ಮುಸ್ಲಿಮರಿಗೆ ಭಾರತದಲ್ಲಿ ರಕ್ಷಣೆ ಸಿಕ್ಕಿದೆ. 1950ರಿಂದೀಚೆಗೆ ಯಾರೊಬ್ಬರೂ ಮುಸ್ಲಿಮರು ಭಾರತದಲ್ಲಿ ದೌರ್ಜನ್ಯವಾಗಿದೆ ಎಂದು ಪಾಕ್‌ಗಾಗಲೀ ಮುಸ್ಲಿಂ ರಾಷ್ಟ್ರಕ್ಕಾಗಲಿ ಹೋಗಿಲ್ಲ. ಅವರ  ಆಸ್ತಿ, ಪಾಸ್ತಿ, ಮಾನದ ರಕ್ಷಣೆ ಗೌರವ ನೀಡಲಾಗಿದೆ. ಆದರೆ ಪಾಕಿಸ್ತಾನ ದೇಶ,  ಒಪ್ಪಂದದಂತೆ‌ ನಡೆದುಕೊಂಡಿಲ್ಲ. ಕಾಲ ಕಾಲಕ್ಕೆ ಅಲ್ಲಿನವರು ನಿರಾಶ್ರಿತರಾಗಿ ದೊಡ್ಡಪ್ರಮಾಣದಲ್ಲಿ ಭಾರತಕ್ಕೆ ಬಂದಿದ್ದಾರೆ. ಬಾಂಗ್ಲಾ ದೇಶದಲ್ಲಿ 1970-71 ರಲ್ಲಿ ಇಸ್ಲಾಮೇತರರ  ಮೇಲೆ ದೊಡ್ಡ ದೌರ್ಜನ್ಯ ನಡೆದು ಇಸ್ಲಾಮೇತರು ದೊಡ್ಡಪ್ರಮಾಣದಲ್ಲಿ ಭಾರತಕ್ಕೆ ಬಂದಾಗ ನಮ್ಮ ದೇಶ ಆಶ್ರಯ ನೀಡಿ ಸೌಲಭ್ಯ ನೀಡಿತ್ತಾದರೂ ಅವರಿಗೆ ಪೌರತ್ವ ನೀಡಿರಲಿಲ್ಲ. ಈಗ ಅವರಿಗೆ ಪೌರತ್ವ ನೀಡಲು ಸಿಎಎ ಕಾಯ್ದೆ ಜಾರಿಗೆ ತರಲಾಗಿದೆ. 2013ರಲ್ಲಿ ಮನಮೋಹನ್ ಸಿಂಗ್ ಲೋಕಸಭೆಯಲ್ಲಿ ನಜ್ಮಹೆಫ್ತುಲ್ಲಾ ಅವರು ಸ್ಪೀಕರ್ ಆಗಿದ್ದ ಸಂದರ್ಭದಲ್ಲಿ ಈ ಮೂರು ದೇಶಗಳ ಜನರಿಗೆ ಪೌರತ್ವ  ಕೊಡುವ ಬಗ್ಗೆ ಮನವಿ ಮಾಡಿದ್ದರು. ಆದರೀಗ ಕಾಂಗ್ರೆಸ್ ಸಿಎಎ ವಿಚಾರದಲ್ಲಿ ವಿರೋಧ  ವ್ಯಕ್ತಪಡಿಸುತ್ತಿದೆ ಎಂದು ಸಿ.ಟಿ.ರವಿ ಆರೋಪಿಸಿದರು.

ತಾಲಿಬಾನ್ ಪ್ರಚೋದಿತ ಇಸ್ಲಾಂ  ಮೂಲಭೂತವಾದದ ದೌರ್ಜನ್ಯದಿಂದ ಕಾಶ್ಮೀರದ ಮೂಲ ನೆಲೆಯಲ್ಲಿ ಕಾಶ್ಮೀರಿ ಪಂಡಿತರು ನಿರಾಶ್ರಿತರಾದರು. ಇಸ್ಲಾಂ ರಾಷ್ಟ್ರದಲ್ಲಿ ಮುಸಲ್ಮಾನರು ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗುವ ಪ್ರಶ್ನೆಯೇ ಬರುವುದಿಲ್ಲ. ನುಸುಳುಕೋರರು ಮತ್ತು ನಿರಾಶ್ರಿತರ ನಡುವೆ ವ್ಯತ್ಯಾಸವಿದೆ. ಅವರಿಬ್ಬರನ್ನು ಒಂದೇ ತಕ್ಕಡಿಯಲ್ಲಿ ತೂಗಬಾರದು. ವಾಸ್ತವಕ್ಕೆ ವಿರುದ್ಧವಾದ ಹೋರಾಟ ಇದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದು ಕೇವಲ ಸಿಎಎ ವಿರುದ್ಧದ ಹೋರಾಟವಲ್ಲ. ದೇಶವನ್ನು ತುಂಡು ಮಾಡುವ ಹೋರಾಟ. ರಮೇಶ್ ಕುಮಾರ್ ಅಜ್ಞಾನಿಗಳೂ ಅಲ್ಲ. ಸಿದ್ದರಾಮಯ್ಯ ಅಮಾಯಕರೂ ಅಲ್ಲ‌. ಅವರು ಸಿಎಎ ವಿರುದ್ಧದ  ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವುದು ತಾತ್ಕಾಲಿಕ ಅನುಕೂಲತೆಗಾಗಿ ಮಾತ್ರ. ಒಂದು ದಿನವೂ  ಕಾಂಗ್ರೆಸಿಗರು ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಖಂಡಿಸಿ ಕಣ್ಣೀರು ಹಾಕಿಲ್ಲ ಏಕೆ ಎಂದು ಅವರು ಪ್ರಶ್ನಿಸಿದರು.

ಅಖಂಡತೆಯ ಮನಸ್ಥಿತಿಯನ್ನು ತುಂಡು ಮಾಡುವ  ಷಡ್ಯಂತ್ರ. ಇದನ್ನು ಕೇವಲ ಒಂದು ಹೋರಾಟ ಎಂದು ಭಾವಿಸುವಂತಿಲ್ಲ. ಅಮೆರಿಕ ಅಧ್ಯಕ್ಷರು  ಭಾರತಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿಯೇ ಹೋರಾಟ ನಡೆದಿರುವುದರ ಹಿಂದೆ ಷಡ್ಯಂತ್ರ ಇದೆ.  ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಎಎ ವಿರುದ್ಧ ಸದ್ದು ಮಾಡುವುದಷ್ಟೆ ಇದರ ಹಿಂದಿನ ಉದ್ದೇಶ ಎಂದು ಸಿ.ಟಿ.ರವಿ  ಕಿಡಿಕಾರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT