ರಾಜಕೀಯ

ದಾವೋಸ್ ಗೆ ಪ್ರಯಾಣ ಬೆಳೆಸಿದ ಸಿಎಂ ಯಡಿಯೂರಪ್ಪ, ಇತ್ತ ಸಚಿವ ಹುದ್ದೆಗೆ ಕಾಯುತ್ತಿರುವ 11 ನೂತನ ಶಾಸಕರು 

Sumana Upadhyaya

ಬೆಂಗಳೂರು: ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿನ್ನೆ ಸ್ವಿಡ್ಜರ್ಲ್ಯಾಂಡ್ ನ ದಾವೊಸ್ ಗೆ ಹೋಗಿದ್ದಾರೆ. ವಿಶ್ವದ ರಾಜಕೀಯ ಮತ್ತು ಉದ್ಯಮ ಗಣ್ಯರು ಇಲ್ಲಿ ವಾರ್ಷಿಕ ಸಭೆಯನ್ನು ನಡೆಸುತ್ತಾರೆ. ಇದೀಗ ಈ ಆರ್ಥಿಕ ಸಮ್ಮೇಳನದಲ್ಲಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುತ್ತಿದ್ದು ಕರ್ನಾಟಕಕ್ಕೆ ಜಾಗತಿಕ ಉದ್ಯಮಿಗಳಿಂದ ಹೆಚ್ಚಿನ ಹೂಡಿಕೆ ತರಲು ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಹೋಗಿದ್ದಾರೆ.


ಸಮ್ಮೇಳನದಲ್ಲಿ 38 ಕೈಗಾರಿಕೋದ್ಯಮಿಗಳು ಮತ್ತು ಹೂಡಿಕೆದಾರರ ಜೊತೆ ಮಾತುಕತೆ, ಸಂವಾದಗಳು ನಿಗದಿಯಾಗಿವೆ, ರಾಜ್ಯದಲ್ಲಿ ಹೂಡಿಕೆ ಮಾಡುವವರಿಗೆ ಸರ್ಕಾರ ತನ್ನ ಇತಿಮಿತಿಯಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡಲಿದೆ ಎಂದು ಸಿಎಂ ಯಡಿಯೂರಪ್ಪ ನಿನ್ನೆ ಪ್ರವಾಸ ಹೋಗುವ ಮುನ್ನ ಸುದ್ದಿಗಾರರಿಗೆ ತಿಳಿಸಿದರು. ದಾವೊಸ್ ನಿಂದ 24ರಂದು ಬಂದ ನಂತರ ಎರಡು ದಿನಗಳೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಕೂಡ ಹೇಳಿದರು.


ಈ ಮಧ್ಯೆ 11 ಮಂದಿ ನೂತನ ಶಾಸಕರು ಯಾವಾಗ ಸಚಿವ ಸಂಪುಟ ವಿಸ್ತರಣೆಯಾಗಿ ತಮಗೆ ಸಚಿವ ಹುದ್ದೆ ನೀಡುತ್ತಾರೊ ಎಂದು ಕಾಯುತ್ತಿದ್ದಾರೆ. ಈಗಾಗಲೇ ವಿಳಂಬವಾಗಿರುವುದಕ್ಕೆ ಅವರು ರೋಸಿಹೋಗಿದ್ದಾರೆ. ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಸಚಿವಾಕಾಂಕ್ಷಿ ಶಾಸಕರ ನಿಯೋಗ ಮೊನ್ನೆ ಹುಬ್ಬಳ್ಳಿಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನಿಟ್ಟಿದ್ದಾರೆ. ಇದು ಸೌಹಾರ್ದಯುತ ಭೇಟಿ ಎಂದು ಶಾಸಕರು ಹೇಳಿದ್ದರೂ ಕೂಡ ಅಮಿತ್ ಶಾ ಅವರಿಗೆ ತಮಗೆ ಸಚಿವ ಹುದ್ದೆ ನೀಡುವ ಕುರಿತು ಮತ್ತೊಮ್ಮೆ ಜ್ಞಾಪಿಸಲು ಹೋಗಿದ್ದರು ಎಂದು ಹೇಳಲಾಗುತ್ತಿದೆ.


ಸಚಿವ ಸಂಪುಟ ವಿಸ್ತರಣೆ ಯಾವಾಗ ಆಗುತ್ತದೆ ಎಂಬ ಬಗ್ಗೆ ಮುಖ್ಯಮಂತ್ರಿ ಸೇರಿದಂತೆ ಯಾರಿಂದಲೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಕೆಲವು ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕುವ ಸಂಬಂಧ ಕಳೆದ ಶನಿವಾರ ಯಡಿಯೂರಪ್ಪನವರು ಅಮಿತ್ ಶಾ ಮುಂದೆ ಇಟ್ಟಿದ್ದ ಪ್ರಸ್ತಾಪ ಅವರಿಗೆ ಹಿಡಿಸಿದಂತೆ ಕಾಣುತ್ತಿಲ್ಲ. ಡಾವೊಸ್ ನಿಂದ ಹಿಂತಿರುಗಿ ಬಂದ ನಂತರ ನನ್ನನ್ನು ದೆಹಲಿಯಲ್ಲಿ ಭೇಟಿ ಮಾಡಿ ಎಂದು ಅಮಿತ್ ಶಾ ಹೇಳಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.


ಸಚಿವ ಸಂಪುಟ ವಿಸ್ತರಣೆ ಸಂಬಂಧ ಅಮಿತ್ ಶಾ ಅವರೊಂದಿಗೆ ಎರಡು ಬಾರಿ ಮಾತನಾಡಿದ್ದೇನೆ. ಸಂಪುಟ ವಿಸ್ತರಣೆಗೆ ಯಾವುದೇ ಸಮಸ್ಯೆ ಇಲ್ಲ. ದಾವೋಸ್ ನಿಂದ ಬಂದ ನಂತರ ಮತ್ತೆ ದೆಹಲಿಗೆ ಹೋಗಿ ಅಮಿತ್ ಶಾ ಅವರನ್ನು ಮತ್ತೊಮ್ಮೆ ಔಪಚಾರಿಕವಾಗಿ ಭೇಟಿ ಆಗಲಿದ್ದೇನೆ. ನಾಲ್ಕು ದಿನಗಳ ಕಾಲ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಾವೋಸ್ ಕಡೆ ಪ್ರಯಾಣ ಬೆಳೆಸಿದ್ದು, ರಾಜ್ಯಕ್ಕೆ ಹೂಡಿಕೆ ತರಲು ವಿಶೇಷವಾದ ಪ್ರಯತ್ನ ನಡೆಸಿ ಹೂಡಿಕೆದಾರರು ಹಾಗು ಕೈಗಾರಿಕೋದ್ಯಮಿಗಳ ಜೊತೆ ಸಂವಾದ ನಡೆಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

SCROLL FOR NEXT