ರಾಜಕೀಯ

ಈ ಬಾರಿ ಹುಟ್ಟುಹಬ್ಬ ಆಚರಿಸದಿರಲು ಎಚ್.ಡಿ‌. ದೇವೇಗೌಡ ನಿರ್ಧಾರ

Nagaraja AB

ಬೆಂಗಳೂರು: ಇದೇ ತಿಂಗಳ 18ರಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಹುಟ್ಟಿದ ದಿನ. 87 ನೇ ವಯಸ್ಸಿಗೆ ಕಾಲಿಡುತ್ತಿರುವ ದೇವೇಗೌಡರು ಈ ಬಾರಿ ಕೊರೋನಾದಿಂದ ಹುಟ್ಟುಹಬ್ಬ ಆಚರಿಸದಿರಲು ನಿರ್ಧರಿಸಿದ್ದಾರೆ.

ಮಹಾಮಾರಿ ಕೊರೋನಾದಿಂದ ರಾಜ್ಯ ತತ್ತರಿಸಿದೆ. ಬಡವರು, ಕಾರ್ಮಿಕರು ತುತ್ತು ಅನ್ನಕ್ಕೂ ಪರಿತಪಿಸುವ ಸ್ಥಿತಿ ಬಂದೊದಗಿದೆ. ಇಂತಹ ವಿಷಮ ಸಂದರ್ಭದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸುವುದು ಸೂಕ್ತವಲ್ಲ ಎಂದು ಎಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಕಳೆದ ಮೂರು ತಿಂಗಳಿಂದ ಇಡೀ ಜಗತ್ತೇ ಕೊರೋನಾ ಮಹಾಮಾರಿಯ ಉಪಟಳದಿಂದ ಗರಬಡಿದು ಕುಳಿತಿದೆ.ಇದರಿಂದ ಭಾರತವಾಗಲೀ ನಮ್ಮ ರಾಜ್ಯವಾಗಲೀ ಹೊರತಾಗಿಲ್ಲ. ಸಾಂಕ್ರಾಮಿಕ ರೋಗವಾದ ಇದಕ್ಕೆ ಮದ್ದು ಶೋಧಿಸಲು ಸಾಧ್ಯವಾಗದೇ ಇರುವುದರಿಂದ ಅನಿವಾರ್ಯವಾಗಿ ಲಾಕ್‌ ಡೌನ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾಗಿಯೇ ದೇವಸ್ಥಾನಗಳಿಂದ ಹಿಡಿದು ಚಲನಚಿತ್ರ ಮಂದಿರಗಳವರೆಗೆ ಮದುವೆ ಸಮಾರಂಭಗಳಿಂದ ಹಿಡಿದು ಸಾವಿನ ಅಂತ್ಯಕ್ರಿಯೆಯವರೆಗೆ ನಿರ್ಬಂಧಗಳು ಇವೆ ಎಂದು ಅವರು ತಿಳಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ತಮ್ಮಂತವರ ಹುಟ್ಟು ಹಬ್ಬದ ಆಚರಣೆಗಳು ಯಾವುದೇ ರೀತಿಯಲ್ಲೂ ಜಾರಿಯಲ್ಲಿರುವ ನಿರ್ಬಂಧಗಳ ಉಲ್ಲಂಘನೆಗೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಮೇ 18 ರ ಸೋಮವಾರ ಹುಟ್ಟು ಹಬ್ಬ ಆಚರಿಸದಿರಲು ನಿರ್ಧರಿಸಿದ್ದು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ನಾಯಕರು ಪ್ರತಿ ವರ್ಷ ಬರುವಂತೆ ಈ ಬಾರಿಯೂ ಹುಟ್ಟುಹಬ್ಬಕ್ಕೆ ಬಂದು ಸೇರತೊಡಗಿದರೆ ಅದು ಕೊರೋನಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ತೀವ್ರ ತೊಂದರೆಯನ್ನು ಮಾಡುತ್ತದೆ. ಹಿಂದಿನ ವರ್ಷಗಳೇ ಬೇರೆ , ಈಗಿನ ಪರಿಸ್ಥಿತಿಯೇ ಬೇರೆ ಎಂಬುದನ್ನು ಎಲ್ಲಾ ಅಭಿಮಾನಿಗಳು , ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕೆಂದು ವಿನಂತಿಸಿದ್ದಾರೆ.

 ಕೊರೋನಾ ಸೋಂಕಿತರ ಸಂಖ್ಯೆ ಕಳೆದ ಒಂದು ವಾರದಿಂದ ಹೆಚ್ಚಳವಾಗಿರುವುದು ತಮ್ಮನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಪರಿಸ್ಥಿತಿ ಎಲ್ಲಿಗೆ ತಲುಪುತ್ತದೋ ಎಂಬ ಆತಂಕವಿರುವುದರಿಂದ ಅಭಿಮಾನಿಗಳು, ಕಾರ್ಯಕರ್ತರು , ಪ್ರಸಕ್ತ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮೇ 18 ರಂದು ಇರುವ ಸ್ಥಳದಿಂದಲೇ ಶುಭಾಶಯಗಳನ್ನು ಅರ್ಪಿಸಬೇಕಾಗಿ ಮನವಿ ಮಾಡಿದ್ದಾರೆ.

SCROLL FOR NEXT